ತುಮಕೂರು: ‘ಮತ ಕಳವು’ ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆ. 5ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮನವಿ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ರಾಹುಲ್ ಗಾಂಧಿ ಕೈ ಬಲಪಡಿಸಬೇಕು’ ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮಯದಲ್ಲಿ 35 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಈಗ ಬಿಹಾರದಲ್ಲಿ 65 ಲಕ್ಷ ಹೆಸರು ತೆಗೆಯಲಾಗಿದೆ. ಈ ರೀತಿ ಮಾಡುವುದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವಂತಾಗಿದೆ. ಜತೆಗೆ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬಳಸಿಕೊಂಡು ವಂಚಿಸಲಾಗುತ್ತಿದೆ. ಚುನಾವಣೆ ಅಕ್ರಮಗಳ ಬಗ್ಗೆ 2014ರಿಂದಲೂ ಪ್ರತಿಭಟಿಸುತ್ತಾ ಬಂದಿದ್ದರೂ ಚುನಾವಣಾ ಆಯೋಗ ನಿರ್ಲಿಪ್ತವಾಗಿದೆ. ಹಾಗಾಗಿ ಮತ ಕಳವಿನ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ವಿವಿಧ ನಿಗಮ, ಮಂಡಳಿಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಒಂದು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ‘ಗ್ಯಾರಂಟಿ’ ಭರವಸೆಗಳಿಂದ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹೇಳುವುದಿಲ್ಲ. ಜನರಿಗೆ ಕೊಟ್ಟಿದ್ದ ಭರವಸೆ ಉಳಿಸಿಕೊಳ್ಳುವ ಸಲುವಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ. ಇದರಿಂದ ಜನರ ಆರ್ಥಿಕ ಮಟ್ಟ ಹೆಚ್ಚಾಗಿದ್ದು, ರಾಜ್ಯದ ತಲಾ ಆದಾಯವೂ ಏರಿಕೆಯಾಗಿದೆ. ಮುಂದಿನ ಬಜೆಟ್ ನಂತರ ಆರ್ಥಿಕ ತೊಂದರೆಗಳು ದೂರವಾಗಲಿವೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಘಟಕ, ಜಿಲ್ಲಾ ಘಟಕ ಮತ್ತಷ್ಟು ಸಕ್ರಿಯವಾಗಬೇಕು. ಪಕ್ಷದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದರು.
ಕೆಎಸ್ಆರ್‌ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ, ಮುಖಂಡರಾದ ರಫೀಕ್ ಅಹಮದ್, ಗಂಗಹನುಮಯ್ಯ, ಆರ್.ರಾಮಕೃಷ್ಣ, ಮುರುಳೀಧರ ಹಾಲಪ್ಪ, ಅಸ್ಲಂ ಪಾಷ, ಇಕ್ಬಾಲ್ ಅಹಮದ್, ಕೆಂಚಮಾರಯ್ಯ, ಎನ್.ಗೋವಿಂದರಾಜು, ಅನ್ವರ್ ಸಾಬ್, ಖಲಿಂವುಲ್ಲಾ, ಬಿ.ಜಿ.ಲಿಂಗರಾಜು, ಸಿದ್ದಾಪುರ ರಂಗಸ್ವಾಮಯ್ಯ, ಮಹೇಶ್, ಫಯಾಜ್, ನಯಾಜ್ ಅಹಮದ್, ಸುಜಾತ, ಭಾಗ್ಯಮ್ಮ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.