ADVERTISEMENT

ಪಂಚಾಯಿತಿ ಮೆಟ್ಟಿಲೇರಿದ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 3:57 IST
Last Updated 2 ಜನವರಿ 2021, 3:57 IST
ಸಿದ್ದಯ್ಯ
ಸಿದ್ದಯ್ಯ   

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿದೆ. ಇದರ ನಡುವೆಯೇ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಹೋರಾಟಗಾರರು ಚುನಾವಣೆಯಲ್ಲಿ ಗೆದ್ದು ಅಧಿಕಾರದ ಹಾದಿ ಹಿಡಿದಿದ್ದಾರೆ.

ಗುಬ್ಬಿ ತಾಲ್ಲೂಕು ಕಡಬ ಗ್ರಾ.ಪಂ ವ್ಯಾಪ್ತಿಯ ‌ಕಾಡಶೆಟ್ಟಿಹಳ್ಳಿ ಕ್ಷೇತ್ರದಿಂದ ಸತತವಾಗಿ ಮೂರನೇ ಬಾರಿಗೆ ಪಂಚಾಯಿತಿ ಸದಸ್ಯರಾಗಿ ಸತೀಶ್ ಆಯ್ಕೆ ಆಗುವ ಮೂಲಕ ಗಮನ ಸೆಳೆದಿದ್ದಾರೆ. ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ರಾಜ್ಯ ಕಾರ್ಯದರ್ಶಿಯೂ ಆಗಿರುವ ಸತೀಶ್, ಗ್ರಾಮದ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಪಂಚಾಯಿತಿ ವ್ಯವಸ್ಥೆ ಸಬಲೀಕರಣಕ್ಕೆ ರಾಜ್ಯದಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತಿರುವವರಲ್ಲಿ ಇವರೂ ಒಬ್ಬರಾಗಿದ್ದಾರೆ.

‘ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತಿಸುವ ವ್ಯಕ್ತಿಗಳಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಆದರೆ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ’ ಎನ್ನುತ್ತಾರೆ ಸತೀಶ್. ಸತೀಶ್ ಎಂಜಿನಿಯರಿಂಗ್ ಪದವೀಧರರು.

ADVERTISEMENT

ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಅಸ್ಲಂ ಪಾಷಾ ಅವರು ಕುನ್ನಾಲ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಾಷಾ ಕೃಷಿಕರಾಗಿದ್ದು, ರೈತ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದಾರೆ.

ತಿಪಟೂರು ತಾಲ್ಲೂಕು ಇಂಡಿಸ್ಕೆರೆ ಪಂಚಾಯಿತಿ ವ್ಯಾಪ್ತಿಯ ಕುಂದೂರು ಗ್ರಾಮದಿಂದ ಗೆದ್ದಿರುವ ಮುರುಳಿ ಮೋಹನ್, ದಲಿತ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ತಂದೆ ಕುಂದೂರು ತಿಮ್ಮಯ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷರು. ‌ಮೊದಲ ಬಾರಿಯ ಸ್ಪರ್ಧೆಯಲ್ಲಿಯೇ ಪಂಚಾಯಿತಿ ಮೆಟ್ಟಿಲು ಹತ್ತಿದ್ದಾರೆ.

ತಿಪಟೂರು ತಾಲ್ಲೂಕಿನ ಬಳುವನೇರಲು ಗ್ರಾ.ಪಂ.ನಿಂದ ಮೊದಲ ಬಾರಿಗೆ ಗೆಲುವು ಸಾಧಿಸಿರುವಸಿದ್ದಯ್ಯ ಅವರು ರೈತ ಸಂಘದ ಬೆಂಬಲದೊಂದಿಗೆ ಸ್ಪರ್ಧಿಸಿದ್ದರು. ರೈತರ ಹೋರಾಟಗಳಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ.

ಶಿರಾ ತಾಲ್ಲೂಕಿನ ಹಂದಿಕುಂಟೆ ಗ್ರಾ.ಪಂ ಗೋಣಿಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಓಂಕಾರ್, ಚಿಕ್ಕನಾಯಕನಹಳ್ಳಿ ತಾಲ್ಲೂಕು ಗಾಣಧಾಳು ಪಂಚಾಯಿತಿ
ಕಾರೇಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಜಯಪ್ರಕಾಶ್ ರೈತ ಸಂಘದಲ್ಲಿ ಗುರುತಿಸಿಕೊಂಡ ಹೋರಾಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.