ADVERTISEMENT

ಚೇಳೂರು: ಮೇವು ಬ್ಯಾಂಕ್ ಆರಂಭ

​ಪ್ರಜಾವಾಣಿ ವಾರ್ತೆ
Published 7 ಮೇ 2024, 13:31 IST
Last Updated 7 ಮೇ 2024, 13:31 IST
ಚೇಳೂರು ಎಪಿಎಂಸಿ ಆವರಣದಲ್ಲಿ ರೈತರಿಗೆ ಮೇವು ವಿತರಿಸಲಾಯಿತು
ಚೇಳೂರು ಎಪಿಎಂಸಿ ಆವರಣದಲ್ಲಿ ರೈತರಿಗೆ ಮೇವು ವಿತರಿಸಲಾಯಿತು   

ಚೇಳೂರು: ಜಾನುವಾರುಗಳ ರಕ್ಷಣೆಗಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮೇವು ಬ್ಯಾಂಕ್ ಮೂಲಕ ಎಪಿಎಂಸಿ ಆವರಣದಲ್ಲಿ ಮೇವು ವಿತರಣೆಗೆ ಚಾಲನೆ ನೀಡಿದೆ.

ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮಾತನಾಡಿ, ಮೇವಿನ ಲಭ್ಯತೆ ಮೂರು ವಾರಕ್ಕಷ್ಟೇ ಇರುವ ಕಾರಣ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದ ಹಿನ್ನೆಲೆ ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು. ಚೇಳೂರು ಹಾಗೂ ಹಾಗಲವಾಡಿ ಹೋಬಳಿಗಳಲ್ಲಿ ರಾಸುಗಳ ಸಂಖ್ಯೆಯೂ ಹೆಚ್ಚಾಗಿದೆ. ಇಲ್ಲಿನ ಎಪಿಎಂಸಿಯಲ್ಲಿ ಮೇವಿನ ಬ್ಯಾಂಕ್ ತೆರೆಯಲಾಗಿದೆ ಎಂದರು.

ಒಟ್ಟು 38 ಟನ್ ಮೇವು ಬಂದಿದೆ. ಪ್ರಸ್ತುತ 450 ಮಂದಿ ರೈತರಿಗೆ ಕಾರ್ಡ್ ಅನ್ನು ಪಶು ಇಲಾಖೆಯಿಂದ ವಿತರಣೆ ಮಾಡಲಾಗಿದೆ. ಪ್ರತಿ ರಾಸುಗೆ ದಿನಕ್ಕೆ 6ಕೆ.ಜಿಯಂತೆ ವಾರಕ್ಕೆ 42 ಕೆ.ಜಿ ವಿತರಣೆ ಮಾಡಲಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಬೇರೆ ಹೋಬಳಿಯಲ್ಲಿಯೂ ಮೇವಿನ ಅವಶ್ಯಕತೆ ಇದ್ದರೆ, ಟಾಸ್ಕ್‌ಫೋರ್ಸ್ ಸಮಿತಿಯ ಗಮನಕ್ಕೆ ಬಂದರೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಚರ್ಚಿಸುವುದಾಗಿ ತಿಳಿಸಿದರು.

ADVERTISEMENT

ತಹಶೀಲ್ದಾರ್ ಆರತಿ ಬಿ. ಮಾತನಾಡಿ, ಎರಡು ಹೋಬಳಿಯಲ್ಲಿ ರಾಸುಗಳನ್ನು ಹೊಂದಿರುವ 450 ರೈತರನ್ನು ಗುರುತಿಸಲಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ಬೆಳಗ್ಗೆ 7.30 ರಿಂದ ಬೆಳಗ್ಗೆ 11.30 ರೊಳಗೆ ಆಗಮಿಸಿ ಮೇವನ್ನು ಪಡೆಯುವಂತೆ ಮನವಿ ಮಾಡಿದರು. ಉಳಿದ ರೈತರಿಗೆ ನಿತ್ಯ ಕಾರ್ಡ್ ವಿತರಣೆ ಮಾಡಲಾಗುವುದು. ಇದಕ್ಕೆ ಪಶು ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಅಕ್ರಮ ಮೇವು ದಾಸ್ತಾನು ಮಾಡುವ ರೈತರ ಮೇಲೆ ಕ್ರಮಕ್ಕೆ ಸೂಚನೆ: ಕೆಲ ರೈತರು ಮನೆಗಳಲ್ಲಿ ಇರುವ ಎಲ್ಲ ಸದಸ್ಯರ ಹೆಸರಲ್ಲಿ ಮೇವು ಕಾರ್ಡ್ ಪಡೆದು ಅಕ್ರಮ ಮೇವು ದಾಸ್ತಾನು ಮಾಡುವ ಪ್ರಕರಣ ಗಮನಕ್ಕೆ ಬಂದಿದೆ. ಇಂತಹ ರೈತರ, ಕಾರ್ಡ್ ವಿತರಿಸುವ ವೈದ್ಯಾಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಎಚ್ಚರಿಸಿದರು.

ಇಒ ಪರಮೇಶ್ ಕುಮಾರ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಉಪ ತಹಶೀಲ್ದಾರ್ ಪ್ರಕಾಶ್, ಸುಷ್ಮಾ, ಕಂದಾಯ ನಿರೀಕ್ಷಕಿ ಸುಮತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.