ADVERTISEMENT

ಕಾಯಕ ಜೀವಿಗಳ ಆಸ್ತಿ ಜನಪದ

ಶಿರಾದಲ್ಲಿ ನಡೆದ ‘ಜಿಲ್ಲಾ ಜಾನಪದ ಸಂಭ್ರಮ’ದಲ್ಲಿ ಗಣ್ಯರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 6:07 IST
Last Updated 18 ಆಗಸ್ಟ್ 2024, 6:07 IST
ಶಿರಾದಲ್ಲಿ ನಡೆದ ‘ಜಿಲ್ಲಾ ಜಾನಪದ ಸಂಭ್ರಮ’ವನ್ನು ಸಾಹಿತಿ ಪ್ರೊ.‌ಎಸ್.ಜಿ.ಸಿದ್ದರಾಮಯ್ಯ ರಾಗಿಕಲ್ಲು ಬೀಸುವ ಮೂಲಕ ಉದ್ಘಾಟಿಸಿದರು
ಶಿರಾದಲ್ಲಿ ನಡೆದ ‘ಜಿಲ್ಲಾ ಜಾನಪದ ಸಂಭ್ರಮ’ವನ್ನು ಸಾಹಿತಿ ಪ್ರೊ.‌ಎಸ್.ಜಿ.ಸಿದ್ದರಾಮಯ್ಯ ರಾಗಿಕಲ್ಲು ಬೀಸುವ ಮೂಲಕ ಉದ್ಘಾಟಿಸಿದರು   

ಶಿರಾ: ಜಾನಪದ ಯಾವುದೋ ಒಂದು ಜಾತಿ, ಧರ್ಮಕ್ಕೆ‌ ಸೀಮಿತವಾಗಿಲ್ಲ. ನಿಸರ್ಗ ಧರ್ಮಕ್ಕೆ ನಿಷ್ಠವಾಗಿದ್ದು ಕಾಯಕ ಜೀವಿಗಳ ಆಸ್ತಿಯಾಗಿದೆ. ಇದನ್ನು ಉಳಿಸಿ ಬೆಳೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.‌ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಕರ್ನಾಟಕ ಜಾನಪದ ಆಕಾಡೆಮಿಯಿಂದ ನಡೆದ ‘ಜಿಲ್ಲಾ ಜಾನಪದ ಸಂಭ್ರಮ’ ಉದ್ಘಾಟಿಸಿ ಮಾತನಾಡಿದರು.

ಜಾನಪದಕ್ಕೆ ಭವ್ಯ ಪರಂಪರೆ ಇದೆ. ಯಾವುದೇ ಧರ್ಮದಲ್ಲಿ ಸಿಗದ ಸಾರ ಜಾನಪದದಲ್ಲಿ ದೊರೆಯುತ್ತದೆ. ಸಾಂಸ್ಕೃತಿಕ ಜಗತ್ತನ್ನು ಜೀವಂತವಾಗಿಡುವುದು ಆಕಾಡೆಮಿಗಳ ಕೆಲಸ ಎಂದರು.

ADVERTISEMENT

ದೇಶದಲ್ಲಿ ಹಲವು ಧರ್ಮ, ಜಾತಿ, ಭಾಷೆಗಳಿಂದ ಬಹುಸಂಸ್ಕೃತಿ ಇದ್ದರೂ, ದೇಶವೇ ಒಂದು ಕುಟುಂಬವಾಗಿದೆ. ಇತ್ತೀಚಿನ ದಿನಗಳಲ್ಲಿ ಏಕ ಭಾಷೆ, ಏಕ ದೇಶ, ಏಕ ಸಂಸ್ಕೃತಿ ಎಂದು ಬಹುಸಂಸ್ಕೃತ ಪದ್ಧತಿಯನ್ನು ನಾಶ ಮಾಡಲು ನೀಚ ಸಂಸ್ಕೃತಿಯವರು ಹೊರಟಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಆಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘ಜನಪದದ ಆಹಾರ, ವೈದ್ಯ ಪದ್ಧತಿ, ಸಂಸ್ಕೃತಿ ನಮಗೆ ಮಾದರಿಯಾಗಬೇಕು. ನಾವು ಕಟ್ಟುವ ಕೈಗಳಾಗಬೇಕೇ ಹೊರತು ಕೆಡವುವ ಕೈಗಳಾಗಬಾರದು’ ಎಂದರು.

ಆಕಾಡೆಮಿ ಸದಸ್ಯ ಸಂಚಾಲಕ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಜನಪದ ಕಲೆ ಮತ್ತು ಕ್ರೀಡೆಗಳು ಮಾಯವಾಗುತ್ತಿವೆ. ಎಲ್ಲಾ ಕಡೆ ಮೊಬೈಲ್ ವ್ಯಾಪಿಸಿದೆ ಎಂದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಚಿತ್ತಯ್ಯ ಪೂಜಾರ್ ಅವರು ‘ತುಮಕೂರು ಜಿಲ್ಲೆ ಜಾನಪದ ಕಲೆಗಳ ಅನನ್ಯತೆ' ಬಗ್ಗೆ ಉಪನ್ಯಾಸ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲ ಗುರುಮೂರ್ತಿ ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಚಿ.ನಾ.ಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ್ ಕಟ್ಟೆಮನೆ, ಗಾಯತ್ರಿ ಶಿವಪ್ರಸಾದ್, ಪ್ರಾಂಶುಪಾಲ ಚಂದ್ರಯ್ಯ, ಪಿ.ಎಚ್.ಮಹೇಂದ್ರಪ್ಪ, ನರೇಶ್ ಬಾಬು, ಸಂಜಯ್ ಎಸ್.ಗೌಡ, ಶಿವು ಚಂಗಾವರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ತಿಪ್ಪೇಶ್ ಹಾಜರಿದ್ದರು.

‘ಜಿಲ್ಲಾ ಜಾನಪದ ಸಂಭ್ರಮ’ದಲ್ಲಿ ಕಲಾ ತಂಡಗಳ ಪ್ರದರ್ಶನವನ್ನು ತುಮಕೂರು ವಿ.ವಿ ಕುಲಸಚಿವೆ ನಾಹಿದಾ ಜಮ್ ಜಮ್ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು
‘ಜಿಲ್ಲಾ ಜಾನಪದ ಸಂಭ್ರಮ’ದಲ್ಲಿ ಜಿಲ್ಲೆಯ ಜನಪದ ಕಲಾವಿದರನ್ನು ಸತ್ಕರಿಸಲಾಯಿತು
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಾನಪದ ತಂಡಗಳು
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಾನಪದ ತಂಡಗಳು

- ಮೆರವಣಿಗೆಗೆ ಸೀಮಿತ

ತುಮಕೂರು ವಿ.ವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ ಹಿಂದೆ ಶಾಲಾ ಕಾರ್ಯಕ್ರಮಗಳಲ್ಲಿ ಜಾನಪದ ಭಾವಗೀತೆ ದೇಶ ಭಕ್ತಿ ಗೀತೆಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಆದರೆ ಈಗ ಸಿನಿಮಾ ಹಾಡುಗಳು ಈ ಜಾಗವನ್ನು ವ್ಯಾಪಿಸಿಕೊಂಡಿವೆ. ಜಾನಪದ ಕಲಾವಿದರು ಕೇವಲ ಮೆರವಣಿಗೆಗೆ ಸೀಮಿತರಾಗುತ್ತಿದ್ದು ವೇದಿಕೆಯಲ್ಲಿ ಅವರಿಗೆ ಸ್ಥಾನವಿಲ್ಲದಂತಾಗಿದೆ. ಹಿಂದೆ ಕಾಲೇಜು ಮುಗಿಸಿ ಕುವೆಂಪು ಬೇಂದ್ರೆ ಅವರಂತಹ ಮಹನೀಯರು ಹೊರ ಬಂದರೆ ಇಂದು ಹೊರಬರುತ್ತಿರುವರನ್ನು ನೋಡಿದರೆ ನೋವಾಗುತ್ತಿದೆ. ಸಂಸ್ಕೃತಿಯನ್ನು ಮರೆಯುತ್ತಿರುವುದೇ ಇದಕ್ಕೆ ಕಾರಣ ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.