ADVERTISEMENT

ಮದುವೆ ಮನೆ ಊಟ; ಒಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 12:45 IST
Last Updated 2 ಮಾರ್ಚ್ 2020, 12:45 IST
ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಗ್ರಾಮಸ್ಥರಿಗೆ ಎಲ್.ಮುತ್ತುಗದಹಳ್ಳಿಯ ಅಂಗನವಾಡಿಯಲ್ಲಿ ಚಿಕಿತ್ಸೆ ನೀಡಲಾಯಿತು
ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಗ್ರಾಮಸ್ಥರಿಗೆ ಎಲ್.ಮುತ್ತುಗದಹಳ್ಳಿಯ ಅಂಗನವಾಡಿಯಲ್ಲಿ ಚಿಕಿತ್ಸೆ ನೀಡಲಾಯಿತು   

ಶಿಡ್ಲಘಟ್ಟ: ಮದುವೆ ಮನೆಯಲ್ಲಿ ಊಟ ಕಲುಷಿತಗೊಂಡಿದ್ದರಿಂದ ಪಾಯ್ಲಹಳ್ಳಿ ನಾರಾಯಣಪ್ಪ(55) ನಿಧನರಾಗಿದ್ದು, ಊಟ ಮಾಡಿ ಅಸ್ವಸ್ಥಗೊಂಡಿದ್ದ ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ, ಪಾಯ್ಲಹಳ್ಳಿ, ಕುರುಬಚ್ಚನಪಡೆಯ ಗ್ರಾಮಸ್ಥರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ಹೊರವಲಯದ ಕಂದವಾರದಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಎಲ್.ಮುತ್ತುಗದಹಳ್ಳಿಯ ವಧುವಿನೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರ್ ಪುರದ ವರನಿಗೆ ಮದುವೆ ನಡೆದಿತ್ತು. ಗುರುವಾರ ರಾತ್ರಿ ಆರತಕ್ಷತೆಯ ಊಟ ಮಾಡಿದ್ದ ಗ್ರಾಮಸ್ಥರಿಗೆ ಮಾರನೆ ದಿನದಿಂದ ಭೇದಿ ಪ್ರಾರಂಭವಾಗಿದೆ.

ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಈ ಬಗ್ಗೆ ವಿವರಣೆ ನೀಡಿ, ‘ಶನಿವಾರ ಮುಂಜಾನೆ ಎಲ್.ಮುತ್ತುಗದಹಳ್ಳಿಗೆ ಭೇಟಿ ನೀಡಲಾಗಿದೆ. ಸುಮಾರು ಇಪ್ಪತ್ತಾರು ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಅವರಲ್ಲಿ ಪೈಲಹಳ್ಳಿಯವರೊಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಎಲ್.ಮುತ್ತುಗದಹಳ್ಳಿಯ ಅಂಗನವಾಡಿಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಮೇಲೂರು ವೈದ್ಯ ಡಾ.ರಮೇಶ್ ಅವರನ್ನು ನಿಯೋಜಿಸಿ, ಚಿಕಿತ್ಸೆ ಕೊಡಲಾಗುತ್ತಿದೆ’ ಎಂದರು.

ADVERTISEMENT

ಜಿಲ್ಲಾ ಸರ್ವೇಕ್ಷಣಾಧಿಕಾರಿ ಬಾಬುರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್ ಗೌಡ ಭೇಟಿ ನೀಡಿದ್ದರು. ಡಾ.ರಮೇಶ್, ಪಿಡಿಒ ಅಂಜನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.