ADVERTISEMENT

ತುಮಕೂರು: ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆ

ಉಪಲೋಕಾಯುಕ್ತ ಬಿ.ವೀರಪ್ಪ ತರಾಟೆ; ಕೆರೆಯಲ್ಲಿ ಗಿಡ ಬೆಳೆಸಿದ ಇಲಾಖೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:50 IST
Last Updated 16 ನವೆಂಬರ್ 2025, 6:50 IST
ತುಮಕೂರಿನ ಅಮಲಾಪುರ ಬಳಿ ನಡೆಯುತ್ತಿರುವ ಗಣಿಗಾರಿಕೆ ಸ್ಥಳಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ತುಮಕೂರಿನ ಅಮಲಾಪುರ ಬಳಿ ನಡೆಯುತ್ತಿರುವ ಗಣಿಗಾರಿಕೆ ಸ್ಥಳಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು    

ತುಮಕೂರು: ‘ನಗರ ಹೊರವಲಯದಲ್ಲಿ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಅರಣ್ಯ ಇಲಾಖೆ ನಿದ್ರಾವಸ್ಥೆಗೆ ಜಾರಿದೆ. ನೀವು ಪ್ರತಿ ತಿಂಗಳು ಸಂಬಳ ಎಣಿಸಿಕೊಂಡು ಮನೆಗೆ ಹೋಗಿ’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಅಮಲಾಪುರ, ಅಜ್ಜಪ್ಪನಹಳ್ಳಿ ಬಳಿಯ ಕ್ರಷರ್‌ ಗಣಿಗಾರಿಕೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂತು. ಅಧಿಕಾರಿಗಳು ಅರಣ್ಯ ಜಾಗದಲ್ಲಿ ಗಣಿಗಾರಿಕೆ ನಡೆಸಲು ಬಿಟ್ಟು, ಕೆರೆಯಲ್ಲಿ ಗಿಡ ಬೆಳೆಸುತ್ತಿದ್ದಾರೆ. ಕಂದಾಯ ಇಲಾಖೆಯವರಿಗೆ ಇದು ಗೊತ್ತೇ ಇಲ್ಲ ಎಂದರು.

ಕ್ರಷರ್‌ ಮಾಲೀಕರು ತಮಗಿಷ್ಟ ಬಂದಂತೆ ಗುಡ್ಡ ಕೊರೆದಿದ್ದಾರೆ. ಯಾವುದೇ ಗಡಿ ಗುರುತಿಸಿಲ್ಲ. ಬೆಂಚ್‌ ಮಾರ್ಕ್‌, ಬಫರ್‌ ಝೋನ್‌ ಸಹ ಇಲ್ಲ. ಎಲ್ಲ ಹೊಡೆದುಕೊಂಡು ಹೋಗಿದ್ದಾರೆ. ಗಡಿಯಿಂದ ಮೂರು ಕಡೆ 7 ಮೀಟರ್‌ ಬಫರ್‌ ಝೋನ್‌ ಬಿಡಬೇಕು. ಎಲ್ಲಿ ಬಿಟ್ಟಿದ್ದಾರೆ ತೋರಿಸಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ. ಅವರ ಪಾಡಿಗೆ ಅವರು ಕೆಲಸ ಮಾಡುತ್ತಿದ್ದಾರೆ. ಕ್ವಾರಿ, ಕ್ರಷರ್‌ ಮಾಲೀಕರು ಭೂಮಿಯಲ್ಲಿ ಸಿಕ್ಕಿದ್ದನೆಲ್ಲಾ ಕೊರೆಯುತ್ತಾರೆ. ಮುಂದೊಂದು ದಿನ ಭೂಮಿಯನ್ನು ಅಸ್ಥಿಪಂಜರದಂತೆ ನೋಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಅರಣ್ಯ ಪ್ರದೇಶದ ಜಾಗ ದಾಟಿಕೊಂಡು ಗುಡ್ಡಕ್ಕೆ ಹೋಗಬೇಕು. ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟವರು ಯಾರು? ಅಭಿವೃದ್ಧಿ ಅಸಮಾತೋಲನವಾದರೆ ಯಾರೂ ಉಳಿಯುವುದಿಲ್ಲ. ನಿಯಮ ಉಲ್ಲಂಘಿಸಿ, ಅರಣ್ಯ ಜಾಗ ಕೊಳ್ಳೆ ಹೊಡೆದವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಗಣಿ ಇಲಾಖೆ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು.

ಕ್ರಷರ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ನೋಂದಣಿಗೆ ಕ್ರಮ ವಹಿಸಬೇಕು. ಮಾಲೀಕರಿಂದ ಕಾರ್ಮಿಕರಿಗೆ ವಿಮೆ ಮಾಡಿಸಬೇಕು. ತುರ್ತಾಗಿ ಈ ಎಲ್ಲ ಕೆಲಸ ಆಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೂರು ನೀರು ಕೊಡಿ

ಅಮಲಾಪುರದ ಬಳಿ ವಾಸವಿರುವ ಹಕ್ಕಿಪಿಕ್ಕಿ ಹಂದಿಜೋಗಿ ಕುಟುಂಬಗಳಿಗೆ ಸೂರು ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಬಿ.ವೀರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. 2018ರಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಇದುವರೆಗೆ ಮೂಲಭೂತ ಸೌಕರ್ಯ ಕೊಟ್ಟಿಲ್ಲ. ಒಂದು ಜೋರಾದ ಮಳೆಯಾದರೆ ಮುಗಿಯಿತು. ಗಣಿಗಾರಿಕೆ ಕ್ವಾರಿಗಳಿಂದ ಕಲ್ಲು ಉರುಳಿ ಬಿದ್ದರೆ ಎಷ್ಟು ಜನ ಉಳಿಯುತ್ತಾರೆ ಎಂಬುವುದು ಗೊತ್ತಿಲ್ಲ. ತುಮಕೂರು ಪಕ್ಕದಲ್ಲಿಯೇ ಇಂತಹ ಸ್ಥಿತಿ ಇದೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕುಟುಕಿದರು. ಕೈ ಮುಗಿದು ಕೇಳುತ್ತೇನೆ ಕೆಲಸ ಮಾಡಿ.... ‘ಅಮಲಾಪುರದ ಹಕ್ಕಿಪಿಕ್ಕಿ ಜನರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಕೆಲಸ ಮಾಡಿ ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ. ಮತ್ತೆ ನಿಮಗೆ ನಮಸ್ಕಾರ ಮಾಡುವುದಿಲ್ಲ. ಆಗ ನನ್ನ ಪೆನ್ನು ಕೆಲಸ ಮಾಡುತ್ತದೆ’ ಎಂದು ಎಚ್ಚರಿಸಿದರು. ನಗರದ ಜಿ.ಪಂ.ನಲ್ಲಿ ನಡೆದ ವಿಚಾರಣೆ ಸಮಯದಲ್ಲಿ ಈ ರೀತಿ ಹೇಳಿದರು.

ಜಿಲ್ಲೆಯಲ್ಲಿ ಎರಡು ವರ್ಷದಿಂದ 4.80 ಲಕ್ಷ ಪೌತಿ ಖಾತೆ ಬಾಕಿ ಇದೆ. ಯಾಕೆ ಮಾಡಿಲ್ಲ ಎಂದು ಬಿ.ವೀರಪ್ಪ ಪ್ರಶ್ನಿಸಿದರು. ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಕೊರಟಗೆರೆ ತುಮಕೂರು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ಕುರಿತ ವಿಚಾರಣೆ ಸಭೆಯಲ್ಲಿ ಮಾತನಾಡಿದರು. ‘ಪ್ರತಿ ಹೋಬಳಿಗೆ 20 ಖಾತೆ ಮಾಡುವ ಗುರಿ ನೀಡಲಾಗಿದೆ. ಒಂದು ವಾರದಲ್ಲಿ ಜಿಲ್ಲೆಯಲ್ಲಿ 15 ಸಾವಿರ ಖಾತೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಪ್ರತಿಕ್ರಿಯಿಸಿದರು. ಲೋಕಾಯುಕ್ತ ಉಪನಿಬಂಧಕ ಎನ್‌.ವಿ.ಅರವಿಂದ ಜಿ.ಪಂ ಸಿಇಒ ಜಿ.ಪ್ರಭು ಎಸ್ಪಿ ಕೆ.ವಿ.ಅಶೋಕ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.