ADVERTISEMENT

ಹೋರಾಟಕ್ಕೆ ಮಾಜಿ ಶಾಸಕರ ಸಾಥ್‌

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 5:10 IST
Last Updated 13 ಏಪ್ರಿಲ್ 2021, 5:10 IST
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸಾರಿಗೆ ನೌಕರರ ಒಕೂಟದ ವತಿಯಿಂದ ಚಾಲಕ ಹಾಗೂ ನಿರ್ವಾಹಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಸಾಥ್ ನೀಡಿದರು
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸಾರಿಗೆ ನೌಕರರ ಒಕೂಟದ ವತಿಯಿಂದ ಚಾಲಕ ಹಾಗೂ ನಿರ್ವಾಹಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಸಾಥ್ ನೀಡಿದರು   

ತುರುವೇಕೆರೆ: ರಾಜ್ಯ ರಸ್ತೆ ಸಾರಿಗೆ ನೌಕರರು ಆರನೇ ವೇತನ ಆಯೋಗ ಜಾರಿ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರು ಪಟ್ಟಣದ ತಾಲ್ಲೂಕು ಕಚೇರಿ ಬಳಿ ಹಮ್ಮಿಕೊಂಡಿದ್ದ ತಟ್ಟೆ, ಲೋಟ ಚಳವಳಿಗೆ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಸಾಥ್‍ ನೀಡಿದರು.

ಪ್ರತಿಭಟನಾನಿರತನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಹಟಮಾರಿತನ ಬಿಟ್ಟು ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದಂತೆ ವೇತನ ಜಾರಿ ಮಾಡಬೇಕು. ನೌಕರರ ದುಡಿಮೆಯಿಂದಲೇ ಸಾರಿಗೆ ಸಂಸ್ಥೆ ನಡೆಯುತ್ತಿರುವುದು. ನೌಕರರಿಗೆ ಸರಿಯಾದ ರೀತಿಯಲ್ಲಿ ಸಂಬಳ ನೀಡದೆ ಕೇವಲ ಅಧಿಕಾರಿ ವರ್ಗದವರಿಗೆ ಸಂಬಳ ನೀಡಿ ತಾರತಮ್ಯ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಅವರು ಸಾರಿಗೆ ನೌಕರರಿಗೆ ಐದು ಸಾವಿರ ಕೋಟಿ ನೀಡಲು ಕಷ್ಟವೇನು ಎಂದು ಪ್ರಶ್ನಿಸಿದರು.

ಅಂದಿನ ಸಾರಿಗೆ ಸಚಿವರು ಸೇರಿ ಹಲವು ಶಾಸಕರು ನಡೆಸಿದ ಸಂಧಾನ ಸಭೆಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವ ಬೇಡಿಕೆಯೊಂದನ್ನು ಹೊರತುಪಡಿಸಿ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದಂತೆ ವೇತನ ನಿಗದಿ ಮಾಡುವುದು ಸೇರಿದಂತೆ 8 ಬೇಡಿಕೆಗಳನ್ನು ಈಡೇರಿಸುವ ಕುರಿತು ಲಿಖಿತ ಭರವಸೆ ನೀಡಿದ್ದರು. 3 ತಿಂಗಳು ಕಳೆದರೂ ಈ ಸರ್ಕಾರ ಈಡೇರಿಲ್ಲ. ಕೂಡಲೇ ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ಯಥಾಸ್ಥಿತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನೆಗೂ ಮುನ್ನಾ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರು, ಮಕ್ಕಳು ಪಟ್ಟಣದ ಗುರುಭವನದ ಆವರಣದಿಂದ ತಟ್ಟೆ, ಲೋಟ ಹಿಡಿದು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನೆಡೆಸಿದರು. ನಂತರ ತಾಲ್ಲೂಕು ಕಚೇರಿ ಶಿರಸ್ತೇದಾರ್ ಕಲ್ಲೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಹರೀಶ್, ಸಿಐಟಿಯು ಕಾರ್ಯದರ್ಶಿ ಸತೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.