ADVERTISEMENT

ನೀರಿನ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ವಂಚನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 3:45 IST
Last Updated 29 ಅಕ್ಟೋಬರ್ 2020, 3:45 IST

ಶಿರಾ: ಕಾಂಗ್ರೆಸ್ ಮತ್ತು ಬಿಜೆಪಿ ನೀರಿನ ವಿಚಾರದಲ್ಲಿ ಜನರನ್ನು ವಂಚಿಸುತ್ತಿವೆ ಎಂದು ಶಾಸಕ ‌ಎಚ್.ಡಿ.ರೇವಣ್ಣ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಗೆ ಹೇಮಾವತಿ ನೀರು ಹರಿಯಲು ಹಾಸನ ಜಿಲ್ಲೆಯವರು ಅಡ್ಡಿ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ’ ಎಂದರು.

ತಾಲ್ಲೂಕಿನ ನೀರು ಬರಲು ನಾವು ಯಾರು ಅಡ್ಡಿ ಮಾಡಿಲ್ಲ. ಮದಲೂರು ಕೆರೆಗೆ ನೀರು ಹರಿಸುವ ಯೋಜನೆಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ಸಮಯದಲ್ಲಿ ಮಂಜೂರಾತಿ ನೀಡಲಾಯಿತು. ನಂತರ 10 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಏಕೆ ನೀರು ಹರಿಸಲಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ಮದಲೂರು ಕೆರೆಗೆ ಚುನಾವಣೆ ಸಮಯದಲ್ಲಿ ನೀರು ಹರಿಸಲು ಬಿಜೆಪಿ ಮುಂದಾಗಿದೆ ಜನರಿಗೆ ಇವರ ನಾಟಕ ತಿಳಿದಿದೆ. ಎರಡು ರಾಷ್ಟ್ರೀಯ ಪಕ್ಷಗಳನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಿ ಪ್ರಾದೇಶಿಕ ಪಕ್ಷಕ್ಕೆ ಮತ ನೀಡುವ ನಿರೀಕ್ಷೆ ಇದೆ. ಕ್ಷೇತ್ರದಲ್ಲಿ ಜೆಡಿಎಸ್ ಪರ ಒಲವು ಹೆಚ್ಚುತ್ತಿದೆ ಎಂದರು.

ಸಂದೇಶ ನೀಡಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ನಾವು ಮಾಡುವುದೇ ಸರಿ ಎನ್ನುವ ಭಾವನೆ ಇದೆ. ಕ್ಷೇತ್ರದಲ್ಲಿ ಬಿಜೆಪಿ ‌ಸೋಲಿಸುವ ಮೂಲಕ ಬಿಜೆಪಿ ಮಾಡುವ ಅಕ್ರಮಗಳನ್ನು ಜನರಿಗೆ ತೋರಿಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶಂಪುರ್ ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ನಾಗರಾಜು, ಕೋಟೆ ಮಹದೇವ್, ಸೀಗಲಹಳ್ಳಿ ವೀರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.