ADVERTISEMENT

ಉಚಿತ ಎಂಜಿನಿಯರಿಂಗ್ ಸೀಟ್: ಸಿಐಟಿ ಕಾಲೇಜು ಪ್ರವೇಶ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:23 IST
Last Updated 12 ಮೇ 2019, 20:23 IST

ತುಮಕೂರು: ‘ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ (ಸಿಐಟಿ) ಸಿ.ಐ.ಟಿ– ಸಿಎಟಿ ಪರೀಕ್ಷೆಯನ್ನು ಜೂನ್ 1ರಂದು ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಎಂಜಿನಿಯರಿಂಗ್ ಸೀಟುಗಳನ್ನು ಸಿ.ಐ.ಟಿಯಲ್ಲಿ ನೀಡಲಾಗುವುದು’ ಎಂದು ಪ್ರಾಂಶುಪಾಲರಾದ ಡಾ.ಡಿ.ಎಸ್.ಸುರೇಶ್ ತಿಳಿಸಿದ್ದಾರೆ.

2019ರಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿದ ಭೌತವಿಜ್ಞಾನ, ಗಣಿತ ಮತ್ತು ರಸಾಯನವಿಜ್ಞಾನದಲ್ಲಿ ಕನಿಷ್ಠ ಶೇ 60 ಅಂಕದೊಂದಿಗೆ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. ಕ್ರೀಡೆಯಲ್ಲಿ ಸಾಧನೆ ಮಾಡಿದ ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಶೇ 10ರಷ್ಟು ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಲಿಖಿತ ಪರೀಕ್ಷೆಯಲ್ಲಿ ಗಣಿತ, ರಸಾಯನ ವಿಜ್ಞಾನ, ಭೌತವಿಜ್ಞಾನ, ಇಂಗ್ಲಿಷ್ ಮತ್ತು ತರ್ಕ ವಿಭಾಗಗಳಿಂದ ಪ್ರಶ್ನೆಗಳನ್ನು ನೀಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ದ್ವಿತೀಯ ಹಂತದಲ್ಲಿ ಗುಂಪು ಸಂದರ್ಶನ ನಡೆಯಲಿದೆ. ಕೊನೆಯ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಸಂದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಈ ಎಲ್ಲಾ ಹಂತಗಳಲ್ಲಿ ಆಯ್ಕೆಯಾದ 6 ವಿದ್ಯಾರ್ಥಿಗಳಿಗೆ ಸಿ.ಐ.ಟಿಯಲ್ಲಿ ಲಭ್ಯವಿರುವ ಕಂಪ್ಯೂಟರ್‌ ವಿಜ್ಞಾನ, ಎಂಜಿನಿಯರಿಂಗ್, ಇನ್‌ಫರ್ಮೆಶನ್ ಸೈನ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯಲ್ಲಿ ಉಚಿತ ಶಿಕ್ಷಣ ನೀಡಲಾಗುವುದು’ ಎಂದು ಹೇಳಿದ್ದಾರೆ.

ಪರೀಕ್ಷೆಯ ಅರ್ಜಿಗಳನ್ನು ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಕಾಲೇಜು ಹಾಗೂ ತುಮಕೂರಿನ ಬಿ.ಎಚ್. ರಸ್ತೆಯ ಸಿದ್ಧಗಂಗಾ ಕಾಂಪ್ಲೆಕ್ಸ್‌ನಲ್ಲಿರುವ ಸಂಸ್ಥೆಯ ಸಿಟ್ರಿಸ್ ಕಚೇರಿಯಲ್ಲಿ ಪಡೆಯಬಹುದಾಗಿದೆ. ಕಾಲೇಜಿನ ವೆಬ್‌ಸೈಟ್‌ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಭಾಗವಹಿಸಲು ಬಯಸುವ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳೊಂದಿಗೆ ಜೂನ್ 25ರೊಳಗೆ ಸಲ್ಲಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 0816–4021402, 4021403, 08131– 22818 ಅಥವಾ ಮೊಬೈಲ್ ಸಂಖ್ಯೆ 8710003260 ಅಥವಾ 9844660664 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಪ್ರಯೋಜನ ಪಡೆಯಲಿ: ‘ಸಂಸ್ಥೆಯು ನಡೆಸುವ ಈ ಪ್ರವೇಶ ಪರೀಕ್ಷೆಯಲ್ಲಿ ತುಮಕೂರಿನ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷರಾದ ಜಿ.ಎಸ್ ಬಸವರಾಜ್, ಕಾರ್ಯದರ್ಶಿ ಜಿ.ಬಿ ಜ್ಯೋತಿಗಣೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.