ADVERTISEMENT

ಸಿದ್ಧಗಂಗಾ ಮಠದಲ್ಲಿ ಶೀತಲೀಕರಣ ಘಟಕ: ಸಚಿವ

ಕೃಷಿ ಇಲಾಖೆಯ ನರ್ಬಾರ್ಡ್‌ನಡಿ ಸ್ಥಾಪನೆ; ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 10:34 IST
Last Updated 20 ಜೂನ್ 2020, 10:34 IST
ಬಿ.ಸಿ.ಪಾಟೀಲ್
ಬಿ.ಸಿ.ಪಾಟೀಲ್   

ತುಮಕೂರು: ‘ಸಾವಿರಾರು ಮಕ್ಕಳು ಮಠದಲ್ಲಿ ಓದುತ್ತಿದ್ದಾರೆ. ತರಕಾರಿ ಸಂಗ್ರಹಕ್ಕೆ ಶೀತಲೀಕರಣ ಘಟಕ ಅವಶ್ಯ. ಸೌಲಭ್ಯ ಒದಗಿಸಿಕೊಡಿ ಎಂದು ಕಳೆದ ಬಾರಿ ನಾನು ಮಠಕ್ಕೆ ಬಂದಾಗ ಭಕ್ತರು ಮನವಿ ಸಲ್ಲಿಸಿದ್ದರು. ಕೃಷಿ ಇಲಾಖೆಯ ನಬಾರ್ಡ್‌ನಡಿ ₹7.5 ಕೋಟಿ ವೆಚ್ಚದಲ್ಲಿ ಶೀತಲೀಕರಣ ಘಟಕ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಸಿದ್ಧಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ‘ರಾಜ್ಯದ ಕೆಲವು ಕಡೆಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆಯಾಗಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆ ಆಗುತ್ತಿದೆ. ರಾಜ್ಯದಲ್ಲಿ ಎಲ್ಲೂ ಬಿತ್ತನೆಬೀಜ, ರಸಗೊಬ್ಬರದ ಕೊರತೆ ಆಗಿಲ್ಲ.‌ ಸಾಕಷ್ಟು ಪೂರೈಕೆ ಮಾಡಲಾಗಿದೆ’ ಎಂದರು.

‘ನಮ್ಮ ಜತೆ ಬಿಜೆಪಿ ಸೇರಿದ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್ ಅವರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಎಚ್.ವಿಶ್ವನಾಥ್ ಅವರಿಗೆ ಮುಂದೆ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಎಪಿಎಂಸಿ ತಿದ್ದುಪಡಿ ಕಾಯ್ದೆಗೂ ಮುನ್ನ 60 ಬಹುರಾಷ್ಟೀಯ ಕಂಪನಿಗಳು ಮುಕ್ತ ಖರೀದಿಗೆ ಅವಕಾಶ ಪಡೆದಿದ್ದವು‌. ಈಗ ಅದನ್ನು ಪೂರ್ಣ ಮುಕ್ತಗೊಳಿಸಿದ್ದೇವೆ. ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಾದರೂ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ಅನುಕೂಲ. ರೈತರಿಗೆ ಮಾರಾಟದ ಸ್ವಾತಂತ್ರ್ಯ ಸಿಗುತ್ತದೆ ಎಂದು ಹೇಳಿದರು.

ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ

ಕಂದಾಯ ಇಲಾಖೆಯಿಂದ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು. ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಪಿಂಚಣಿ ಸೌಲಭ್ಯ ಪಡೆಯಬೇಕು ಎಂದು ತಹಶೀಲ್ದಾರ್ ಜಿ.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸಾರ್ವಜನಿಕರು ನಾಡಕಚೇರಿಯ ಉಪ ತಹಶೀಲ್ದಾರ್, ಕಂದಾಯ ಅಧಿಕಾರಿ ಹಾಗೂ ನನ್ನನ್ನು ಭೇಟಿ ಮಾಡಿ ಆಧಾರ್ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ನಲಕು ಪಾಸ್ ಪುಸ್ತಕ, ಅಂಚೆ ಕಚೇರಿ ಉಳಿತಾಯ ಖಾತೆಯ ಪಾಸ್ ಪುಸ್ತಕ, ಭಾವಚಿತ್ರ ಇತ್ಯಾದಿ ಅಗತ್ಯ ದಾಖಲಾತಿ ನೀಡಬೇಕು’ ಎಂದು ತಿಳಿಸಿದರು.

ಸಾರ್ವಜನಿಕರಿಂದ ಹಣ ಪಡೆಯುವಂತಹ ಪ್ರಕರಣಗಳು ಕಂಡು ಬಂದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.