ತುಮಕೂರು: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜ. 26ರಿಂದ 28ರ ವರೆಗೆ ಫಲ, ಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಅಗತ್ಯ ಮಾಹಿತಿ ನೀಡುವತ್ತ ಗಮನ ಹರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಇಲ್ಲಿ ಗುರುವಾರ ತಿಳಿಸಿದರು.
ಈ ಬಾರಿ ವಿಶೇಷವಾಗಿ ಪ್ರದರ್ಶನ ಏರ್ಪಡಿಸಲಾಗಿದೆ. ಮಂದರಗಿರಿ ಬೆಟ್ಟದ ಪ್ರತಿಕೃತಿ, ಸಿರಿಧಾನ್ಯ ಕಲಾಕೃತಿ, ತರಕಾರಿ ಕೆತ್ತನೆಯಲ್ಲಿ ಇಸ್ರೋಗೆ ನಮನ, ಜಾನುರ್ ಕಲೆಯಲ್ಲಿ ಹೊಮ್ಮುವ ರೈತ ಜೀವನ, ಮರಳು ಕಲಾಕೃತಿ ಪ್ರಮುಖ ಆಕರ್ಷಣೆಯಾಗಿವೆ. ಉಚಿತ ಪ್ರವೇಶವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಾರಂಪರಿಕ, ಆಧುನಿಕ ಕೃಷಿ ಸಲಕರಣೆಗಳು ಹಾಗೂ ಯಂತ್ರೋಪಕರಣಗಳ ಪ್ರದರ್ಶನ, ಅಕ್ವೇರಿಯಂ, ದೇಶಿ ತಳಿಗಳ ಪರಿಚಯ, ರೇಷ್ಮೆ ಗೂಡಿನ ಕರಕುಶಲ ವಸ್ತುಗಳ ಪ್ರದರ್ಶನ, ವನ್ಯ ಜಗತ್ತು ಪರಿಚಯ, ಮಹಿಳಾ ಸಬಲೀಕರಣ, ಪ್ರವಾಸಿ ತಾಣಗಳ ಪರಿಚಯ ಸೇರಿದಂತೆ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಫಲ, ಪುಷ್ಪ ಪ್ರದರ್ಶನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಬಿ.ಸಿ.ಶಾರದಮ್ಮ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.