ADVERTISEMENT

ಮತ್ತಷ್ಟು ಹಿಗ್ಗಿದ ಸೀಬೆ ವಿಸ್ತೀರ್ಣ

367 ಹೆಕ್ಟೇರ್‌ಗೆ ಹರಡಿದ ಸೀಬೆ; ವರ್ಷಕ್ಕೆ 7 ಸಾವಿರ ಮೆಟ್ರಿಕ್‌ ಟನ್‌ ಇಳುವರಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 5:22 IST
Last Updated 27 ಜೂನ್ 2025, 5:22 IST
ಸೀಬೆ ಗಿಡ
ಸೀಬೆ ಗಿಡ   

ತುಮಕೂರು: ಜಿಲ್ಲೆಯಲ್ಲಿ ಸೀಬೆ ಹಣ್ಣಿನ ವಿಸ್ತೀರ್ಣ ಹಿಗ್ಗುತ್ತಿದ್ದು, ಸದ್ಯ ವರ್ಷಕ್ಕೆ 7 ಸಾವಿರ ಮೆಟ್ರಿಕ್‌ ಟನ್‌ಗೂ ಅಧಿಕ ಸೀಬೆ ಮಾರುಕಟ್ಟೆಗೆ ಬರುತ್ತಿದೆ.

2018–19ನೇ ಸಾಲಿನಲ್ಲಿ 184 ಹೆಕ್ಟೇರ್‌ ಪ್ರದೇಶದಲ್ಲಿ ಸೀಬೆ ಬೆಳೆಯುತ್ತಿದ್ದರು. 2022–23ರ ವೇಳೆಗೆ ದುಪ್ಪಟ್ಟಾಗಿದ್ದು, 367 ಹೆಕ್ಟೇರ್‌ಗೆ ವಿಸ್ತರಿಸಿದೆ. ಕಳೆದ ಹಲವು ವರ್ಷಗಳಿಂದ ವಿದೇಶದ ‘ತೈವಾನ್‌’ ಸೀಬೆಗೆ ಮಾರುಕಟ್ಟೆಯಲ್ಲಿ ಉತ್ತಮ ದರ, ಬೇಡಿಕೆ ಇದೆ. ವಿದೇಶಿ ತಳಿ ದೇಶಕ್ಕೆ ಲಗ್ಗೆ ಇಟ್ಟಾಗ ಹೆಚ್ಚಿನ ರೈತರು ಇದೇ ತಳಿಯ ಸಸಿ ನೆಟ್ಟರು. ಈಗ ಅದು ಉತ್ತಮ ಫಸಲು ನೀಡುತ್ತಿದ್ದು, ಬೆಳೆಗಾರರ ಬದುಕು ಬೆಳಗಿದೆ.

ತೋಟಗಾರಿಕಾ ಇಲಾಖೆಯ ಅಂಕಿ–ಅಂಶಗಳ ಪ್ರಕಾರ 5 ವರ್ಷಗಳ ಹಿಂದೆ ವರ್ಷಕ್ಕೆ 3 ಸಾವಿರ ಮೆಟ್ರಿಕ್‌ ಟನ್‌ ಹಣ್ಣು ಉತ್ಪಾದನೆ ಆಗುತಿತ್ತು. ಈಗ 7 ಸಾವಿರ ಮೆಟ್ರಿಕ್‌ ಟನ್‌ಗೆ ಏರಿಕೆ ಕಂಡಿದೆ. ಬರದ ನಾಡು ಎಂದೇ ಕರೆಸಿಕೊಳ್ಳುವ ಪಾವಗಡ, ಮಧುಗಿರಿ, ಶಿರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸೀಬೆ ಬೆಳೆ ವಿಸ್ತೀರ್ಣ ಪ್ರತಿ ವರ್ಷ ಜಾಸ್ತಿಯಾಗುತ್ತಿದೆ. ಮಧುಗಿರಿಯಲ್ಲಿ ಅತಿ ಹೆಚ್ಚು 107 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ತುರುವೇಕೆರೆ ಭಾಗದಲ್ಲಿ ಅತಿ ಕಡಿಮೆ 0.64 ಹೆಕ್ಟೇರ್‌ ಪ್ರದೇಶದಲ್ಲಿ ಸೀಬೆ ಬೆಳೆಯಲಾಗುತ್ತಿದೆ.

ADVERTISEMENT

ಜಿಲ್ಲೆಯ ರೈತರು ದೇಸಿ ತಳಿಯ ಜತೆಗೆ ‘ತೈವಾನ್‌ ವೈಟ್‌ ಸೀಬೆ’ ಬೆಳೆಯುತ್ತಿದ್ದಾರೆ. ಇದು ಒಣ ಹವೆ, ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ಉತ್ತಮ ಫಸಲು ನೀಡುತ್ತದೆ. ಎಕರೆಗೆ 7ರಿಂದ 8 ಟನ್‌ ಇಳುವರಿ ಸಿಗುತ್ತದೆ. ರೈತರಿಂದ ಕೆ.ಜಿಗೆ ₹25ರಿಂದ ₹30ಕ್ಕೆ ಖರೀದಿಸಿ, ಮಾರುಕಟ್ಟೆಯಲ್ಲಿ ಕೆ.ಜಿ ₹100ರಿಂದ ₹120ರ ವರೆಗೂ ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಮಹಾರಾಷ್ಟ್ರ, ಮುಂಬೈ, ಪುಣೆಗೂ ಜಿಲ್ಲೆಯ ಹಣ್ಣು ರಫ್ತಾಗುತ್ತಿದೆ. ದೇಶಿಯ ತಳಿಗೆ ಹೋಲಿಸಿದರೆ ‘ತೈವಾನ್‌ ಸೀಬೆ’ ಗಾತ್ರ ದಪ್ಪವಾಗಿರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿರುವ ಕಾರಣಕ್ಕೆ ರೈತರು ‘ತೈವಾನ್‌’ ತಳಿ ಕಡೆಗೆ ಮುಖ ಮಾಡುತ್ತಿದ್ದಾರೆ.

ಖಾಸಗಿ ಕಂಪನಿಯವರು ಸಸಿ ಮಾರಾಟ ಮಾಡುತ್ತಿದ್ದಾರೆ. ಕೆಲವು ಕಡೆ ಸಸಿ ಕೊಟ್ಟು ರೈತರ ಜತೆಗೆ ಹಣ್ಣು ಖರೀದಿಯ ಒಪ್ಪಂದ ಮಾಡಿಕೊಳ್ಳುತ್ತಾರೆ. ಫಸಲು ಕೈ ಸೇರಿದ ನಂತರ ನಿಗದಿಪಡಿಸಿದ ಹಣ ನೀಡಿ ತೋಟಗಳಿಂದ ಹಣ್ಣು ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ರೈತರ ಹಣ್ಣು ಸಾಗಾಟದ ಖರ್ಚು, ಸಮಯ ಉಳಿಸಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು.

**

ಕಡಿಮೆ ಶ್ರಮ

ಸೀಬೆ ಹೆಚ್ಚಿನ ಶ್ರಮ ಕೇಳುವುದಿಲ್ಲ. ನೀರು ಬಿಸಿಲು ಒಣ ಹವೆ ಇದ್ದರೆ ಉತ್ತಮ ಫಸಲು ಸಿಗುತ್ತದೆ. ಜಿಲ್ಲೆಯಲ್ಲಿ ದೇಶಿಯ ತಳಿಗಳ ಜತೆಗೆ ‘ತೈವಾನ್‌’ ಬೆಳೆಯುವುದು ಸ್ವಲ್ಪ ಜಾಸ್ತಿಯಾಗಿದೆ. ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇರುವುದರಿಂದ ಹೆಚ್ಚಿನ ರೈತರು ‘ತೈವಾನ್‌’ ಕಡೆ ವಾಲುತ್ತಿದ್ದಾರೆ. ಪ್ರಶಾಂತ್‌ ತೋಟಗಾರಿಕೆ ತಜ್ಞರು ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.