ADVERTISEMENT

ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 4:57 IST
Last Updated 9 ನವೆಂಬರ್ 2023, 4:57 IST
ಶಿರಾದಲ್ಲಿ ಬುಧವಾರ ನಡೆದ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಶಾಸಕ ಟಿ.ಬಿ.ಜಯಚಂದ್ರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಇದ್ದರು
ಶಿರಾದಲ್ಲಿ ಬುಧವಾರ ನಡೆದ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಶಾಸಕ ಟಿ.ಬಿ.ಜಯಚಂದ್ರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಇದ್ದರು   

ಶಿರಾ: ‘ಬರ ಪರಿಸ್ಥಿತಿ ನಿರ್ವಹಣೆಗಾಗಿ ಎಲ್ಲ ಜಿಲ್ಲೆಗಳಿಗೂ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಜಿಲ್ಲೆಗೆ ₹15 ಕೋಟಿ ಬಿಡುಗಡೆಯಾಗಿದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತ ಸಭೆಯಲ್ಲಿ ಮಾತನಾಡಿದರು. ‌‌‌

ಜನವರಿ ನಂತರದ ನಾಲ್ಕು ತಿಂಗಳಲ್ಲಿ ಕುಡಿಯುವ ನೀರು ಹಾಗೂ ಪಶುಗಳಿಗೆ ಮೇವಿನ ತೊಂದರೆಯಾಗದಂತೆ ಬರನಿರ್ವಹಣೆ ಮಾಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ನಿಗದಿತ ಕಾಲಮಿತಿಯೊಳಗಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ತಾಲ್ಲೂಕಿನಲ್ಲಿ ರಾಸುಗಳ ಸಂಖ್ಯೆ ಹೆಚ್ಚಿದ್ದು, ನೀರಿರುವ ಕೆರೆಗಳ ಸದ್ಬಳಕೆ ಮಾಡಿಕೊಂಡು ಪಶುಗಳಿಗೆ ಮೇವು ಬೆಳೆದು ಮುಂದಿನ ಬೇಸಿಗೆಯಲ್ಲಿ ಮೇವಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ತಾಲ್ಲೂಕಿನಲ್ಲಿ 270 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಸಮಗ್ರ ನಿರ್ವಹಣೆ ಮಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ದುರಸ್ತಿಗೆ ಬಂದಿರುವ ಖಾಸಗಿ ಘಟಕಗಳನ್ನು ಸಹ ಸರಿಪಡಿಸಲು ಕ್ರಮವಹಿಸಲಾಗುತ್ತಿದೆ ಎಂದರು.

₹500 ಕೋಟಿ ವೆಚ್ಚದಲ್ಲಿ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 300ರಿಂದ 500 ಜನ ಹಾಗೂ ಪ್ರತಿ ರೈತನಿಗೆ ₹30ರಿಂದ ₹50 ಸಾವಿರದವರೆಗಿನ ಕಾಮಗಾರಿಯಂತೆ ಜಿಲ್ಲೆಯ ಒಂದು ಲಕ್ಷ ರೈತರನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಉಪವಿಭಾಗಾಧಿಕಾರಿ ರಿಷಿ ಆನಂದ್ ಇದ್ದರು.

ಮಾಹಿತಿ ಇಲ್ಲ

ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಡಾ.ಜಿ‌.ಪರಮೇಶ್ವರ ಅವರು ಮೊದಲ ಬಾರಿಗೆ ಶಿರಾ ತಾಲ್ಲೂಕಿಗೆ ಬಂದಿದ್ದರು. ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯದ ಕುರಿತು ನಡೆದ ಸಭೆಗೆ ಪತ್ರಕರ್ತರಿಗೆ ಮಾಹಿತಿ ನೀಡದೆ ಅವರನ್ನು ದೂರವಿಟ್ಟು ಸಭೆ ನಡೆಸಲಾಯಿತು.

ಶಿರಾದಲ್ಲಿ ಬುಧವಾರ ನಡೆದ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಶಾಸಕ ಟಿ.ಬಿ.ಜಯಚಂದ್ರ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.