ADVERTISEMENT

ಪಿಯು ವಿದ್ಯಾರ್ಥಿಗಳಿಗೆ ಪತ್ರ ಬರೆದ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:50 IST
Last Updated 25 ಫೆಬ್ರುವರಿ 2026, 6:50 IST
ತುಮಕೂರಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಚಿವ ಜಿ.ಪರಮೇಶ್ವರ ಬರೆದಿರುವ ಪತ್ರ ವಿತರಿಸಲಾಯಿತು
ತುಮಕೂರಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಚಿವ ಜಿ.ಪರಮೇಶ್ವರ ಬರೆದಿರುವ ಪತ್ರ ವಿತರಿಸಲಾಯಿತು   

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪತ್ರ ಬರೆದು, ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

ಸಚಿವರು ಬರೆದಿರುವ ಪತ್ರವನ್ನು ಪರೀಕ್ಷೆಗೆ ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ವಿತರಿಸಲಾಗಿದೆ.

ಪತ್ರದ ಸಾರಾಂಶ: ಜಿಲ್ಲೆಯ ಭವಿಷ್ಯವಾಗಿರುವ ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ನಿಮ್ಮ ಶಿಕ್ಷಣ ಯಾತ್ರೆಯ ಮಹತ್ವದ ಘಟ್ಟವೊಂದು ಬಂದು ನಿಂತಿದೆ. ಇದುವರೆಗಿನ ಕಲಿಕೆಯ ಶ್ರಮವು ಸಾರ್ಥಕವಾಗುವುದು ಪರೀಕ್ಷೆಯ ಫಲಿತಾಂಶದಲ್ಲಿ. ಫೆ. 28ರಿಂದ ಪರೀಕ್ಷೆ ಆರಂಭವಾಗುತ್ತಿದ್ದು, ನಿಮ್ಮೆಲ್ಲರಿಗೂ ಹೃದಯ ಪೂರ್ವಕ ಶುಭಾಶಯಗಳು.

ADVERTISEMENT

ಡಾ.ಬಿ.ಆರ್.ಅಂಬೇಡ್ಕರ್ ಹೇಳುವಂತೆ ‘ಸಮಾಜದಲ್ಲಿ ಸಮಾನತೆ ಮತ್ತು ಸ್ವಾಭಿಮಾನ ಪಡೆಯಲು ಶಿಕ್ಷಣವೇ ಮುಖ್ಯ ಸಾಧನ’. ಈ ಮಾತನ್ನು ಮನದಲ್ಲಿ ಇಟ್ಟುಕೊಂಡು, ಭಯವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು.

ಪರೀಕ್ಷೆ ನಿಮ್ಮ ಸಾಮರ್ಥ್ಯವನ್ನು ಅಳೆಯುವ ಒಂದು ಹಂತ ಮಾತ್ರ. ಯಶಸ್ಸು ಅಂತಿಮವಲ್ಲ. ವಿಫಲತೆ ಅಂತ್ಯವಲ್ಲ. ಮುಂದುವರಿಯುವ ಧೈರ್ಯವೇ ನಿಜವಾದ ವಿಜಯ. ಪರಿಶ್ರಮವೇ ನಿಮ್ಮ ಶಕ್ತಿ. ಶಾಂತ ಮನಸ್ಸಿನಿಂದ, ನಿಯಮಿತ ಅಭ್ಯಾಸದೊಂದಿಗೆ ಉತ್ತರಗಳನ್ನು ಬರೆಯಿರಿ. ಸಾಮರ್ಥ್ಯದ ಮೇಲೆ ನಂಬಿಕೆ ಇಡಿ.

ಗೌರವಾನ್ವಿತ ಪೋಷಕರೇ, ಈ ಸಮಯದಲ್ಲಿ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದು. ಮಕ್ಕಳಿಗೆ ಒತ್ತಡ ಹಾಕಬಾರದು. ವಿಶ್ವಾಸ, ಪ್ರೋತ್ಸಾಹ ಕೊಟ್ಟರೆ ಇತಿಹಾಸವಾಗಿ ಉಳಿಯುತ್ತಾರೆ. ಅಂಕಗಳಿಗಾಗಿ ಅಲ್ಲ, ಅವರ ಪ್ರಯತ್ನಕ್ಕಾಗಿ ಪ್ರಶಂಸಿಸಿ. ನಿಮ್ಮ ಪ್ರೀತಿ, ಬೆಂಬಲವೇ ಅವರ ದೊಡ್ಡ ಶಕ್ತಿ.

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ, ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ಅವರ ತವರೂರಾದ ಜಿಲ್ಲೆಯು ಶಿಕ್ಷಣದಲ್ಲಿ ಸದಾ ಮುಂಚೂಣಿಯಲ್ಲಿದೆ. ನಿಮ್ಮ ಸಾಧನೆಯ ಮೂಲಕ ಜಿಲ್ಲೆಯ ಗೌರವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೆಂಬುದು ನನ್ನೆದೆಯ ಆಶಯ. ಒಂದು ಪೀಳಿಗೆಗೆ ಶಿಕ್ಷಣ ಕೊಟ್ಟರೆ, ಅನೇಕ ಪೀಳಿಗೆಗಳು ಬೆಳಗುತ್ತವೆ. ನಿಮ್ಮ ಸಾಧನೆ ನಿಮ್ಮ ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೂ ದಾರಿ ತೋರಲಿ. ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ, ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.

ಜಿ.ಪರಮೇಶ್ವರ
ಬಿ.ವಿ.ಅಶ್ವಿಜ
ಪೂರ್ವಭಾವಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅಂತಿಮ ಪರೀಕ್ಷೆಯಲ್ಲಿ ಫಲಿತಾಂಶ ಮತ್ತಷ್ಟು ಸುಧಾರಿಸಲಿದೆ. ಉಪನ್ಯಾಸಕರು ಸಹ ಸಾಕಷ್ಟು ಶ್ರಮ ಹಾಕಿದ್ದಾರೆ
ಬಿ.ವಿ.ಅಶ್ವಿಜ ಸಿಇಒ ಜಿ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.