
ಕೊರಟಗೆರೆ: ‘ಮಧುಗಿರಿ ಹಾಗೂ ಕೊರಟಗೆರೆ ಕ್ಷೇತ್ರ ನನ್ನನ್ನು ಉನ್ನತ ಮಟ್ಟಕ್ಕೆ ಬೆಳೆಸಿದೆ. ಮಧುಗಿರಿ ಕ್ಷೇತ್ರದ ಜನತೆ ಗಿಡನೆಟ್ಟು ಪೋಷಿಸಿದರು. ಹಣ್ಣು ಬಿಡುವ ಹೊತ್ತಿಗೆ ಕೊರಟಗೆರೆ ಕ್ಷೇತ್ರಕ್ಕೆ ಕಳಿಸಿದರು. ಈ ಕ್ಷೇತ್ರದ ಜನ ನನ್ನನ್ನು ಉನ್ನತ ಹುದ್ದೆ ಏರಲು ಆಶೀರ್ವದಿಸಿದರು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ತಾಲ್ಲೂಕಿನ ಚಟ್ಟೇನಹಳ್ಳಿ ಗ್ರಾಮದ ಗಂಗಮಾಳಮ್ಮ, ಮೈಲಾರಲಿಂಗೇಶ್ವರ ನೂತನ ದೇವಾಲಯದ ಪ್ರಾಣ, ಕಳಶ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದರು.
ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ಒಂದು ಮಗು ವಿದ್ಯಾವಂತವಾದರೆ ಇಡೀ ಕುಟುಂಬದ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಬಡತನ ನಿವಾರಣೆಗೆ ಶಿಕ್ಷಣವೇ ಉತ್ತಮ ಮಾರ್ಗ. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಪರಮೇಶ್ವರ ಅವರಿಗೆ ಕಂಬಳಿ ಹೊದಿಸಿ, ಜೋಡಿ ಕುರಿಗಳನ್ನು ನೀಡಿದರು.
ಇದಕ್ಕೂ ಮುನ್ನ ತಾಲ್ಲೂಕಿನ ಶಾಂತಲಿಂಗಯ್ಯನಪಾಳ್ಯ ರಸ್ತೆ, ಮುದ್ದನಹಳ್ಳಿ ರಸ್ತೆ ಹಾಗೂ ಬಿಳೇಕಲ್ಲಹಳ್ಳಿ- ಬಿಡಿ ಪುರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ತಾಲ್ಲೂಕು ಬ್ಲಾಕ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಬಿಡಿ ಪುರ ಗ್ರಾ.ಪಂ.ಅಧ್ಯಕ್ಷ ಈಶ್ವರ್, ಉಪಾಧ್ಯಕ್ಷೆ ಭಾರತಿ ಸುರೇಶ್ ಹಾಗೂ ಎ.ಡಿ.ಬಲರಾಮಯ್ಯ, ವಾಲೆಚಂದ್ರಯ್ಯ, ಎಚ್.ಕೆ.ಮಹಾಲಿಂಗಪ್ಪ, ಹನುಮಾನ್, ಎಲ್.ರಾಜಣ್ಣ, ನಾರಾಯಣಪ್ಪ, ನಾಗಭೂಷಣ್, ಆನಂದ್, ಟಿ.ಸಿ.ರಾಮಯ್ಯ, ಈಶ್ವರಪ್ಪ, ಕವಿತ, ನರಸರಾಜು, ಸುರೇಶ್, ವೆಂಕಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.