ADVERTISEMENT

ತುಮಕೂರು | ಹಿಂದೂ ಮಹಾಗಣಪತಿಗೆ ಬೀಳ್ಕೊಡುಗೆ

ನಿಷೇಧದ ಮಧ್ಯೆಯೂ ಡಿ.ಜೆ ಬಳಕೆ; ಬೃಹತ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:52 IST
Last Updated 13 ಸೆಪ್ಟೆಂಬರ್ 2025, 5:52 IST
ತುಮಕೂರಿನಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ವತಿಯಿಂದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ನಡೆಯಿತು
ತುಮಕೂರಿನಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ವತಿಯಿಂದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ನಡೆಯಿತು   

ತುಮಕೂರು: ವಿಶ್ವ ಹಿಂದೂ ಪರಿಷತ್‌, ಬಜರಂಗದಳ ವತಿಯಿಂದ ನಗರದ ಭದ್ರಮ್ಮ ಛತ್ರ ವೃತ್ತದ ಬಳಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ಯುವಕ–ಯುವತಿಯರು, ಮಕ್ಕಳು ಸೇರಿ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಮೆರವಣಿಗೆ ಮಧ್ಯರಾತ್ರಿ ತನಕ ನಡೆಯಿತು. ನಾಸಿಕ್‌ ಡೋಲು, ಡೊಳ್ಳು ಕುಣಿತ ಇತರೆ ಕಲಾ ತಂಡಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೂವುಗಳಿಂದ ಅಲಂಕರಿಸಿದ ಟ್ರ್ಯಾಕ್ಟರ್‌ಗಳಲ್ಲಿ ಬಾಲಗಂಗಾಧರ ತಿಲಕ್‌, ಭಾರತ ಮಾತೆ ಮತ್ತು ಇತರರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಕೇಂದ್ರ ಬಿಂದು ಬ್ರಹ್ಮೋಸ್ ಕ್ಷಿಪಣಿ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬೃಹತ್‌ ಆಕಾರದ ಆಂಜನೇಯನ ಸ್ತಬ್ಧ ಚಿತ್ರ ಗಮನ ಸೆಳೆಯಿತು. ನಿಷೇಧದ ಮಧ್ಯೆಯೂ ಡಿ.ಜೆ ಬಳಸಲಾಯಿತು. ವಿವಿಧ ಹಾಡು, ತಮಟೆ ಸದ್ದಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು.

ADVERTISEMENT

ಭದ್ರಮ್ಮ ಛತ್ರ ವೃತ್ತದ ಬಳಿಯಿಂದ ಶುರುವಾದ ಮೆರವಣಿಗೆ ಟೌನ್‌ಹಾಲ್‌, ಕಾಲ್‌ಟೆಕ್ಸ್‌, ಮಂಡಿಪೇಟೆ, ಸ್ವಾತಂತ್ರ್ಯ ಚೌಕ, ಅಶೋಕ ರಸ್ತೆ ಮೂಲಕ ಮತ್ತೆ ಬಿ.ಎಚ್‌.ರಸ್ತೆ ತಲುಪಿ ಅಲ್ಲಿಂದ ಎಂ.ಜಿ.ರಸ್ತೆ, ಗುಂಚಿ ಚೌಕ, ಅಂಬೇಡ್ಕರ್‌ ರಸ್ತೆಯಿಂದ ಕೋಡಿ ಬಸವಣ್ಣ ವೃತ್ತ ತಲುಪಿತು. ಅಲ್ಲಿ ಸಿಡಿಮದ್ದುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಗಾರ್ಡನ್‌ ರಸ್ತೆಯಲ್ಲಿ ಸಾಗಿ ಕೆಎನ್‌ಎಸ್‌ ಕಲ್ಯಾಣಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಯಿತು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಹೆಬ್ಬೂರು ರಾಮೇನಹಳ್ಳಿ ಮಠದ ಶಿವಪಂಚಾಕ್ಷರಿ ಸ್ವಾಮೀಜಿ, ಅಟವಿ ಮಠದ ಅಟವಿ ಮಲ್ಲಿಕಾರ್ಜುನ ಸ್ವಾಮೀಜಿ, ರೇವಣ್ಣಸಿದ್ಧೇಶ್ವರ ಮಠದ ಬಿಂದುಶೇಖರ ಒಡೆಯರ್‌ ಸ್ವಾಮೀಜಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ಬಿ.ಎಸ್.ಮಂಜುನಾಥ್, ಮಹೇಂದ್ರ ವೈಷ್ಣವ್, ಡಾ.ಎಸ್.ಪರಮೇಶ್, ಮಂಜುನಾಥ್, ಎಚ್.ಜಿ.ಚಂದ್ರಶೇಖರ್‌, ಕೆ.ಜೆ.ರುದ್ರಪ್ಪ, ಸುರೇಶ್‌ರಾವ್, ಜಿ.ಕೆ.ಶ್ರೀನಿವಾಸ್, ಕೋರಿ ಮಂಜುನಾಥ್, ನರಸಿಂಹಮೂರ್ತಿ, ಜೀವನ್, ಮೃದುಲ್‌ ವೈಷ್ಣವ್, ಪ್ರದೀಪ್‌, ಟಿ.ಆರ್‌.ಸದಾಶಿವಯ್ಯ, ಕೆ.ಧನುಶ್‌ ಮೊದಲಾದವರು ಪಾಲ್ಗೊಂಡಿದ್ದರು.

ವಿವಿಧ ಕಡೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಅಹಿತಕರ ಘಟನೆ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದರು. ನೂರಾರು ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಗುರುವಾರ ಗಣಪತಿ ಮೂರ್ತಿಗಳು ಸಾಗುವ ಮಾರ್ಗದಲ್ಲಿ ಪೊಲೀಸ್‌ ತಂಡದಿಂದ ಪಥಸಂಚಲನ ನಡೆಸಲಾಗಿತ್ತು. ಪೂರ್ವಭಾವಿಯಾಗಿ ತಯಾರಿ ನಡೆಸಿ, ಹೆಚ್ಚಿನ ಸಮಸ್ಯೆಯಾಗದಂತೆ ಕ್ರಮ ವಹಿಸಿದರು.

ತುಮಕೂರಿನಲ್ಲಿ ಶುಕ್ರವಾರ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಇತರರು ಹಾಜರಿದ್ದರು
ಮೆರವಣಿಗೆಯಲ್ಲಿ ಗಮನ ಸೆಳೆದ ಆಂಜನೇಯ ಸ್ತಬ್ಧ ಚಿತ್ರ
ಮೆರವಣಿಗೆಯಲ್ಲಿ ಶಾಸಕರಾದ ಬಿ.ಸುರೇಶ್‌ಗೌಡ ಜಿ.ಬಿ.ಜ್ಯೋತಿಗಣೇಶ್‌ ತಮಟೆ ಸದ್ದಿಗೆ ಹೆಜ್ಜೆ ಹಾಕಿದರು

- ನರ್ತಿಸಿದ ಶಾಸಕರು ವಿಸರ್ಜನಾ ಮಹೋತ್ಸವದಲ್ಲಿ ಶಾಸಕ ಬಿ.ಸುರೇಶ್‍ಗೌಡ ವಾದ್ಯಗಳ ನಾದಕ್ಕೆ ಕುಣಿದು ಕುಪ್ಪಳಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌ ಮುಖಂಡ ವೈ.ಎಚ್‌.ಹುಚ್ಚಯ್ಯ ನಿಂತಲ್ಲೇ ಕುಣಿದರು. ಶಾಸಕರ ನೃತ್ಯ ಗಮನ ಸೆಳೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸವಾರರು ಪರದಾಡಿದರು. ಬೆಳಿಗ್ಗೆ 11 ಗಂಟೆಯಿಂದಲೇ ಎಸ್‌.ಎಸ್‌.ವೃತ್ತದಿಂದ ಕಾಲ್‌ಟೆಕ್ಸ್‌ ವರೆಗೆ ಒಂದು ಬದಿ ರಸ್ತೆ ಬಂದ್‌ ಮಾಡಲಾಗಿತ್ತು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.