ADVERTISEMENT

ಏ... ನಮ್‌ ಜಿಲ್ಲೆಗೆ ಗಾಂಧಿ ಬಂದಿದ್ರಂತೆ...

ಮೂರು ದಿನ ನಡೆಯುವ ಛಾಯಾಚಿತ್ರ ಪ್ರದರ್ಶನದಲ್ಲಿ ಮಕ್ಕಳ ಮಾತು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 2:27 IST
Last Updated 8 ಡಿಸೆಂಬರ್ 2019, 2:27 IST
ಗುಬ್ಬಿ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧಿ ಛಾಯಾಚಿತ್ರ ಮತ್ತು ವಿಡಿಯೊ ತುಣುಕುಗಳನ್ನು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಕುತೂಹಲದಿಂದ ವೀಕ್ಷಿಸಿದರು
ಗುಬ್ಬಿ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧಿ ಛಾಯಾಚಿತ್ರ ಮತ್ತು ವಿಡಿಯೊ ತುಣುಕುಗಳನ್ನು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಕುತೂಹಲದಿಂದ ವೀಕ್ಷಿಸಿದರು   

ಗುಬ್ಬಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ವತಿಯಿಂದ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಗುಬ್ಬಿಯ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಡಿ. 9ರವರೆಗೆ ನಡೆಯುವ ಗಾಂಧೀಜಿ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಬೆಂಗಳೂರಿನ ಪ್ರತಿರೂಪಿ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯದ ಎಲ್ಲ ಜಿಲ್ಲೆಯ ಕೆಲವು ಪ್ರಮುಖ 3 ತಾಲ್ಲೂಕುಗಳಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ.

ಗಾಂಧೀಜಿ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯಕ್ಕೆ ಹೋರಾಡಿದ ಪರಿಯನ್ನು ಛಾಯಾಚಿತ್ರ ಮತ್ತು ವಿಡಿಯೊ ತುಣುಕುಗಳಲ್ಲಿ ನೋಡುಗರ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

ADVERTISEMENT

ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗಗಳಿಂದ ಬರುತ್ತಿದ್ದ ಪ್ರಯಾಣಿಕರು ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳು, ಸ್ಥಳೀಯರು ಒಂದು ಕ್ಷಣ ನಿಂತು ಕುತೂಹಲದಿಂದ ಮಾಹಿತಿ ಓದಿ ‘ಏ.. ಗಾಂಧಿಯವರು ನಮ್ಮ ಜಿಲ್ಲೆಗೆ, ತಾಲ್ಲೂಕಿಗೆ ಬಂದು ಹೋಗಿದ್ದಾರೆ. ಇದು ನಮಗೆ ಗೊತ್ತೇ ಇರಲಿಲ್ಲ’ ಎಂದು ಮಾತನಾಡಿಕೊಳ್ಳುತ್ತಿದ್ದರು.

ಮತ್ತೊಂದು ಕಡೆ ಗಾಂಧಿ ಪ್ರತಿಮೆಯ ಪಕ್ಕದಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಇನ್ನೊಂದು ಕಡೆ ಕೆಲವು ಶಾಲೆಯ ಚಿಣ್ಣರು ಮತ್ತು ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಸೇರಿಕೊಂಡು ತಮಗೆ ಅವಶ್ಯಕ ವಿಚಾರಗಳನ್ನು ಬರೆದುಕೊಳ್ಳುತ್ತಿದ್ದರು.

ಈಗಾಗಲೇ ತಿಪಟೂರು, ಚಿಕ್ಕನಾಯಕನಹಳ್ಳಿ ಪ್ರದರ್ಶನ ಮುಗಿದಿದೆ.

ಪ್ರದರ್ಶನದಲ್ಲಿ: ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟಗಳಲ್ಲಿ ಗಾಂಧೀಜಿ ಅವರು ಕರ್ನಾಟಕಕ್ಕೆ ಭೇಟಿ ನೀಡಿದ ಪ್ರದೇಶಗಳು, ಅಸ್ಪೃಶ್ಯತೆ ನಿವಾರಣೆಗಾಗಿ ಗಾಂಧೀಜಿ ನಡೆಸಿದ ಆಂದೋಲನ, 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಅಧಿವೇಶನ ಸೇರಿದಂತೆ ಅವರ ಜೀವನ ಚರಿತ್ರೆಯ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.