ADVERTISEMENT

ತಿಪಟೂರು: ಸತ್ಯಗಣಪತಿ ವಿಸರ್ಜನೆಗೆ ಸಾವಿರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 5:58 IST
Last Updated 24 ನವೆಂಬರ್ 2025, 5:58 IST
ತಿಪಟೂರು ಸತ್ಯಗಣಪತಿ ವಿಸರ್ಜನಾ ಮಹೋತ್ಸವ
ತಿಪಟೂರು ಸತ್ಯಗಣಪತಿ ವಿಸರ್ಜನಾ ಮಹೋತ್ಸವ   

ತಿಪಟೂರು: ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಸತ್ಯಗಣಪತಿ ವಿಸರ್ಜನಾ ಮಹೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಶನಿವಾರ ರಾತ್ರಿ ಆಸ್ಥಾನ ಮಂಟಪದಿಂದ ಹೊರಟ ಮೆರವಣಿಗೆ ದೊಡ್ಡಪೇಟೆ, ಕನ್ನಿಕಾ ಪರಮೇಶ್ವರಿ ದೇವಾಸ್ಥಾನ ರಸ್ತೆ, ಕೋಟೆ, ನೀಲಕಂಠಸ್ವಾಮಿ ಸರ್ಕಲ್ ಮೂಲಕ ಸಾಗಿತು. ಭಾನುವಾರ ಮುಂಜಾನೆ ಗಾಂಧಿನಗರ, ಕಾರ್ಪೊರೇಷನ್‌ ರಸ್ತೆ, ರಾಮಮಂದಿರ ರಸ್ತೆ, ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸಾಗಿ ಸಿಂಗ್ರಿ ನಂಜಪ್ಪ ವೃತ್ತದಿಂದ ಬಿ.ಆರ್.ಆಂಬೇಡ್ಕರ್ ವೃತ್ತದಿಂದ ಅಮಾನಿಕೆರೆಯ ಬಳಿವರೆಗೆ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಸತ್ಯಗಣಪತಿಗೆ ಕೊಬ್ಬರಿ, ಕಿತ್ತಳೆ, ಸೇಬು, ಕಜ್ಜಾಯ, ಸೇವಂತಿಗೆ, ಚಕ್ಕುಲಿ, ಕರಿಕಡುಬು, ಕರಿದ ಪದಾರ್ಥಗಳಿಂದ ಮಾಡಿದ ಭಾರಿ ಗಾತ್ರದ ಹಾರಗಳು ಸೇರಿದಂತೆ ವಿವಿಧ ಬಗೆಯ ದೊಡ್ಡ ಹಾರಗಳನ್ನು ಭಕ್ತರು ಸಮರ್ಪಸಿದರು. ಪ್ರತಿ ಅಂಗಡಿಗಳ ಮುಂದೆ ಮಾವಿನ ತೋರಣ, ಬಾಳೆಗಿಡಗಳ ಅಲಂಕಾರದೊಂದಿಗೆ ಅನ್ನದಾನ, ಫಲಹಾರ, ಮಜ್ಜಿಗೆ, ಪಾಯಸ ನೀಡಲಾಯಿತು. ನೂರಾರು ತೆಂಗಿನ ಕಾಯಿ ಈಡುಗಾಯಿ, ನಗರದ ರಸ್ತೆಯ ಮೇಲೆ ವಿವಿಧ ಬಣ್ಣದ ರಂಗೋಲಿ ಹಾಕಲಾಗಿತ್ತು..

ADVERTISEMENT

ಗಣೇಶೋತ್ಸವದಲ್ಲಿ ಕೋಲಾಟ, ವೀರಗಾಸೆ, ನಂದಿಧ್ವಜ, ಚಂಡೆ, ಹುಲಿ ಕುಣಿತ, ಭದ್ರ ಕಾಳಿ ಕುಣಿತ, ಕೀಲು ಕುದುರೆ, ಕುದುರೆ ಸವಾರಿ, ಡೊಳ್ಳು ಕುಣಿತ, ನಾದಸ್ವರ ಭಕ್ತರ ಮನ ತಣಿಸಿತು. ಡಿ.ಜೆ., ಸಿಡಿಮದ್ದಿನ ನಡುವೆ ಭಾನುವಾರ ಮೆರವಣಿಗೆ ನಡೆಯಿತು.

ನಗರದೆಲ್ಲೆಡೆ ದೀಪಾಲಂಕಾರ, ಕೇಸರಿ ಧ್ವಜ, ಗೋಡೆ ಅಲಂಕಾರವಿತ್ತು. ಈ ಬಾರಿ 55 ಅಡಿ ಎತ್ತರ, 22 ಅಡಿ ಅಗಲದ ಬೃಹತ್ ಹನುಮ ಧ್ವಾರ ಎಲ್ಲರ ಗಮನ ಸೆಳೆಯಿತು.

ಡಿ.ಜೆ. ಸದ್ದಿಗೆ ಯುವಕ, ಯುವತಿಯರು ಸೇರಿದಂತೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಆಟದ ಸಾಮಗ್ರಿ, ಸಿಹಿತಿಂಡಿ ಅಂಗಡಿಗಳು ಎಲ್ಲರನ್ನು ಆಕರ್ಷಿಸಿತು.

1,500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 

ತಿಪಟೂರು ಸತ್ಯಗಣಪತಿ ವಿಸರ್ಜನಾ ಮಹೋತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.