ತುಮಕೂರು: ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ನಗರದ ಟೌನ್‌ಹಾಲ್ ಬಳಿಯ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಆ. 27ರಂದು ಪಂಚಮುಖಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. 17 ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಪ್ರತಿ ದಿನ ವಿಶೇಷ ಪೂಜೆ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಅದ್ದೂರಿಯಾಗಿ ನಡೆದ ಶೋಭಾಯಾತ್ರೆಗೆ ಸಾವಿರಾರು ಜನರು ಸಾಕ್ಷಿಯಾದರು. ಜಿಲ್ಲೆಯ ವಿವಿಧ ಭಾಗಗಳ ಯುವಕ–ಯುವತಿಯರು ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ತಮಟೆ, ಇತರೆ ವಾದ್ಯಗಳ ನಾದಕ್ಕೆ ಕುಣಿದು ಕುಪ್ಪಳಿಸಿದರು.
ನಂದಿಧ್ವಜ, ವೀರಗಾಸೆ, ಡಂಕವಾದ್ಯ, ತಮಟೆವಾದ್ಯ, ನಾಸಿಕ್ ಡೋಲ್ ವಿವಿಧ ಕಲಾ ತಂಡಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದವು. ಬ್ರಹ್ಮೋಸ್ ಕ್ಷಿಪಣಿ, ಪಾರ್ವತಿ-ಪರಮೇಶ್ವರ, ಆಂಜನೇಯ, ಶ್ರೀರಾಮ, ಶಿವಕುಮಾರ ಸ್ವಾಮೀಜಿ, ಅಯ್ಯಪ್ಪಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್, ನಂದಿಯ ಸ್ತಬ್ಧ ಚಿತ್ರಗಳು ಗಮನ ಸೆಳೆದವು. 10ಕ್ಕೂ ಹೆಚ್ಚು ವಾಹನಗಳಲ್ಲಿ ಭಾರತ ಮಾತೆ ಸೇರಿ ಇತರರ ಭಾವಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.
ಟೌನ್‌ಹಾಲ್ ವೃತ್ತದಿಂದ ಆರಂಭವಾದ ಮೆರವಣಿಗೆಯು ಕಾಲ್‌ಟೆಕ್ಸ್ ವೃತ್ತ, ಜೆ.ಸಿ.ರಸ್ತೆ, ಮಂಡಿಪೇಟೆ ವೃತ್ತ, ಅಶೋಕ ರಸ್ತೆ ಮುಖಾಂತರ ಮತ್ತೆ ಟೌನ್‌ಹಾಲ್ ತಲುಪಿ ಎಂ.ಜಿ.ರಸ್ತೆ, ಗುಂಚಿ ಚೌಕ, ಕೋಟೆ ಆಂಜನೇಯ ವೃತ್ತ, ಗಾರ್ಡನ್ ರಸ್ತೆ ಮುಖಾಂತರ ಸಾಗಿ ಕೆಎನ್‌ಎಸ್ ಕಲ್ಯಾಣಿ ಬಳಿ ಕೊನೆಯಾಯಿತು. ಕಲ್ಯಾಣಿಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಯಿತು.
ರಸ್ತೆ ಬಂದ್: ನಿರಂತರವಾಗಿ ಎರಡನೇ ದಿನವೂ ಸಾರ್ವಜನಿಕರು, ವಾಹನ ಸವಾರರು ಪರದಾಡಿದರು. ಟೌನ್‌ಹಾಲ್ ಬಳಿ ಬಿ.ಎಚ್.ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಪ್ರತಿ ದಿನ ಹೆಚ್ಚಿನ ಜನದಟ್ಟಣೆ ಸೇರುವ ಪ್ರದೇಶ, ಪ್ರಮುಖ ರಸ್ತೆಗಳಲ್ಲಿಯೇ ಮೆರವಣಿಗೆ ನಡೆದ ಪರಿಣಾಮ ಜನ ತೊಂದರೆ ಅನುಭವಿಸಿದರು. ನಗರದ ವಾಣಿಜ್ಯ ಕೇಂದ್ರಗಳಾದ, ಹೆಚ್ಚಿನ ವ್ಯಾಪಾರ–ವಹಿವಾಟು ನಡೆಯುವ ಮಂಡಿಪೇಟೆ, ಎಂ.ಜಿ.ರಸ್ತೆಯಲ್ಲಿಯೂ ಸಮಸ್ಯೆಯಾಯಿತು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ನಿಟ್ರಹಳ್ಳಿಯ ಆದಿಲಕ್ಷ್ಮಿ ಮಹಾಸಂಸ್ಥಾನ ಪೀಠದ ನೀಲಕಂಠಾಚಾರ್ಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಸೊಗಡು ಶಿವಣ್ಣ, ಮುಖಂಡರಾದ ಟಿ.ಬಿ.ಶೇಖರ್, ಮಂಜು ಭಾರ್ಗವ್, ಪ್ರಭಾಕರ್, ಧನಿಯಕುಮಾರ್, ಮಾರಣ್ಣ ಪಾಳೇಗಾರ್, ಸಿ.ಆರ್.ಮೋಹನ್‍ಕುಮಾರ್, ಟಿ.ವೈ.ಯಶಸ್, ರೇಣುಕಾನಂದ್, ಲೋಕಣ್ಣ, ಮಂಜೇಶ್, ಕಿರಣ್‍ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.