ADVERTISEMENT

ಗೂಳೂರು ಮಹಾಗಣಪತಿ ಪ್ರತಿಷ್ಠಾಪನೆ

ನ.29ರ ವರೆಗೆ ಜನರಿಗೆ ದರ್ಶನ; ನ.30 ಮತ್ತು ಡಿ.1ರಂದು ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 11:26 IST
Last Updated 29 ಅಕ್ಟೋಬರ್ 2019, 11:26 IST
ಗೂಳೂರು ಗಣಪತಿಗೆ ಪೂಜೆ ಸಲ್ಲಿಸಿದ ಭಕ್ತರು
ಗೂಳೂರು ಗಣಪತಿಗೆ ಪೂಜೆ ಸಲ್ಲಿಸಿದ ಭಕ್ತರು   

ತುಮಕೂರು: ಪ್ರಸಿದ್ಧ ಗೂಳೂರು ಮಹಾಗಣಪತಿಯ ದರ್ಶನ ಇಂದಿನಿಂದ ಒಂದು ತಿಂಗಳ ಕಾಲ ಭಕ್ತರಿಗೆ ದೊರೆಯಲಿದೆ. ಐತಿಹಾಸಿಕ ಹಿನ್ನೆಲೆಯ ಮಹಾಗಣಪತಿಯನ್ನು ಕಾರ್ತಿಕ ಮಾಸದಲ್ಲಿ 1 ತಿಂಗಳು ಪ್ರತಿಷ್ಠಾಪಿಸಲಾಗುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಬಲಿಪಾಡ್ಯಮಿ ದಿನ ಬೆಳಿಗ್ಗೆ ಗಣೇಶಮೂರ್ತಿಗೆ ವಿಶೇಷ ಪೂಜೆಯೊಂದಿಗೆ ಕಣ್ಣುಧಾರಣೆ ಮಾಡಲಾಯಿತು. ಮಂಗಳವಾರದಿಂದ
ಆರಂಭವಾಗಿರುವ ಗಣೇಶಮೂರ್ತಿಯ ವಿಶೇಷ ಪೂಜಾ ಕೈಂಕರ್ಯ ನ.29ರ ವರೆಗೆ ನೆರವೇರಲಿದೆ.

12 ಅಡಿ ಎತ್ತರ 5 ಅಡಿ ಅಗಲ ಗಣೇಶ ಮೂರ್ತಿ ಇದೆ. 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವರು. ಪ್ರತಿದಿನ ರಾತ್ರಿ 9ಕ್ಕೆ ಮಹಾಮಂಗಳಾರತಿ ನಡೆಯಲಿದೆ. 18 ಕೋಮಿನವರು ಗಣಪನಿಗೆ ವಿವಿಧ ಸೇವೆ ಸಲ್ಲಿಸಲಿದ್ದಾರೆ.

ADVERTISEMENT

ಗಣೇಶಮೂರ್ತಿಯ ಜಾತ್ರಾ ಮಹೋತ್ಸವ ನ.30 ಮತ್ತು ಡಿ.1ರಂದು ನಡೆಯಲಿದೆ ಎಂದು ಗೂಳೂರು ಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಜಿ.ಎಸ್.ಶಿವಕುಮಾರ್ ತಿಳಿಸಿದರು.

30ರಂದು ರಾತ್ರಿ ಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. 1ರಂದು ಸಂಜೆ 5ರ ನಂತರ ಗೂಳೂರು ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹೇಳಿದರು.

ಭೃಗುಮಹರ್ಷಿ ಕಾಶಿಯಾತ್ರೆಗೆ ಹೋಗಲು ಈ ಮಾರ್ಗದಲ್ಲಿ ಬಂದಾಗ ಚೌತಿ ಹಬ್ಬ ಇರುತ್ತದೆ. ಆಗ ಇಲ್ಲಿಯೇ ಅವರು ತಂಗಿದ್ದರು. ಕಲ್ಯಾಣಿಯಲ್ಲಿ ಸ್ನಾನ ಮುಗಿಸಿ ಬೆನಕನನ್ನು ಪೂಜಿಸಿ ಪ್ರತಿಷ್ಠಾಪಿಸಿದರು. ತಮ್ಮ ಪ್ರಯಾಣ ಮುಂದುವರಿಸದೆ 3 ತಿಂಗಳು ಇಲ್ಲೇ ತಪಸ್ಸು ಮಾಡಿದರು.

ಗ್ರಾಮಸ್ಥರು ಯಾರು ಮಹರ್ಷಿ ಅವರ ಜತೆ ಮಾತನಾಡುವುದಿಲ್ಲ. ಒಂದು ದಿನ ಅವರು ಕುದುರೆ ಮೇಲೆ ತೆರಳುತ್ತಿದ್ದಾಗ ಅಡ್ಡ ಹಾಕಿ ಕೇಳಿದಾಗ ನಾನು ಗೂಳಿಪಟ್ಟಣಕ್ಕೆ (ಗೂಳೂರು) ಹೋಗುತ್ತೇನೆ. ಗಣಪತಿ ಉದ್ಭವ ಮಾಡುತ್ತೇನೆ’ ಎಂದು ಹೇಳಿದರು. ಆಗ ನಮಗೂ ಗಣಪತಿ ಉದ್ಭವ ಮಾಡುವುದನ್ನು ತೋರಿಸಿ ಎಂದು ಗ್ರಾಮಸ್ಥರು ಕರೆ ತಂದಾಗ ಗಣಪತಿಯನ್ನು ಮಣ್ಣಿನಲ್ಲಿ ಮಾಡಿ ಪ್ರತಿಷ್ಠಾಪಿಸಿ ಇದೇ ರೀತಿ ಮುಂದುವರಿಸಿಕೊಂಡು ಹೋಗಿ ಎಂದು ಹೇಳಿದರಂತೆ.

ಅಂದಿನಿಂದ ಇಲ್ಲಿ ಗೌರಿ ಗಣೇಶ ಹಬ್ಬದಲ್ಲಿ ಗಣಪತಿ ಪ್ರತಿಷ್ಠಾಪಿಸುವುದಿಲ್ಲ. ಗಣೇಶ ಚೌತಿಯಂದು ಮೂರ್ತಿ ತಯಾರಿ ನಡೆಯುತ್ತದೆ. ಶಿಲ್ಪಿ ಗುರುಮೂರ್ತಿ ಮೂರ್ತಿ ರೂಪಿಸುತ್ತಾರೆ ಎಂದು ಅರ್ಚಕ ಶಿವಕುಮಾರ ಶಾಸ್ತ್ರಿ ತಿಳಿಸಿದರು.

**

ಚೌತಿ ದಿನ ನಿರ್ಮಾಣಕ್ಕೆ ಚಾಲನೆ
ಗಣೇಶ ಚೌತಿ ಸಂದರ್ಭದ ಬದಲು ಕಾರ್ತಿಕ ಮಾಸದಲ್ಲಿ ಗೂಳೂರಿನಲ್ಲಿ ಗಣೇಶ ಉತ್ಸವ ನಡೆಯುವುದು ವಿಶೇಷ. ‌ಚೌತಿಯಂದು ಮೂರ್ತಿ ನಿರ್ಮಾಣ ಆರಂಭವಾಗಲಿದೆ. ಆಯುಧಪೂಜೆ, ವಿಜಯದಶಮಿ ವೇಳೆಗೆ ಮೂರ್ತಿ ಒಂದು ಆಕಾರ ಪಡೆಯಲಿದೆ. ಆ ಸಂದರ್ಭದಲ್ಲಿ ಅದರ ನಾಬಿಯೊಳಗೆ ಚಿಕ್ಕಗಣಪತಿ ಕೂರಿಸಲಾಗುವುದು. ಕಾರ್ತಿಕ ಪಾಡ್ಯ ಪ್ರಾರಂಭವಾಗುವ ವೇಳೆಗೆ ಸರ್ವಾಲಂಕಾರಭೂಷಿತನಾಗಿ ರೂಪುಗೊಂಡು ಬಲಿಪಾಡ್ಯಮಿಯಿಂದ ಭಕ್ತರಿಗೆ ದರ್ಶನ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.