ತುಮಕೂರು: ಬಡ್ಡಿಹಳ್ಳಿ ಸಮೀಪದ ನಗರದ ಹೊರವರ್ತುಲ ರಸ್ತೆಯ ಬದಿಯಲ್ಲಿನ ಸಾಂದ್ರಿಕೃತ ನೈಸರ್ಗಿಕ ಅನಿಲ(ಸಿಎನ್‌ಜಿ) ಸರಬರಾಜು ಕೊಳವೆಯಲ್ಲಿ ಸೋಮವಾರ ಬೆಳಿಗ್ಗೆ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.
ಕಾಮಗಾರಿಯೊಂದಕ್ಕೆ ರಸ್ತೆ ಅಗೆಯಾಗಿತ್ತು. ಅಗೆದ ಗುಂಡಿಯಿಂದ ಬೆಳಿಗ್ಗೆ 8ರ ಹೊತ್ತಿಗೆ ಜ್ವಾಲೆ ಹೊಮ್ಮುತ್ತಿರುವುದನ್ನು ಸ್ಥಳೀಯರು ಗಮನಿಸಿದರು. ಅಗ್ನಿಶಾಮಕ ದಳಕ್ಕೆ ತಿಳಿಸಿದರು.
ಸ್ಥಳಕ್ಕೆ ಬಂದ ದಳವು, ಮೊದಲು ಸಿಎನ್‌ಜಿ ಸರಬರಾಜು ಮಾಡುವ ಏಜೆನ್ಸಿಯಿಂದ ಆ ಪ್ರದೇಶದ ಮುಖ್ಯ ವಾಲ್ವ್ ಅನ್ನು ಬಂದ್ ಮಾಡಿಸಿತು. ಕೊಳವೆಯಲ್ಲಿದ್ದ ಅನಿಲವು ಸುಮಾರು ಅರ್ಧ ಗಂಟೆ ಉರಿಯಿತು. ಈ ವೇಳೆ ದಳದ 10 ಸಿಬ್ಬಂದಿಯು ಎರಡು ಅಗ್ನಿಶಮನ ವಾಹನಗಳಿಂದ ಕಾರ್ಯಾಚರಣೆ ನಡೆಸಿ, ಬೆಂಕಿಯು ಹರಡದಂತೆ ತಡೆಯಿತು.
ಗ್ಯಾಸ್ ಏಜೆನ್ಸಿಯ ಸಿಬ್ಬಂದಿಯು ಮಧ್ಯಾಹ್ನ 1ರ ಹೊತ್ತಿಗೆ ಕೊಳವೆಯಲ್ಲಿನ ಸೋರಿಕೆ ಜಾಗವನ್ನು ರಿಪೇರಿ ಮಾಡಿ, ಸರಿಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.