ADVERTISEMENT

ಸರ್ಕಾರದ ನೀತಿಗಳು ಬದಲಾಗಲಿ; ಸಿಐಟಿ ಪ್ರತಿಭಟನೆ

ವಿವಿಧ ಬೇಡಿಕೆಗಳು ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 14:45 IST
Last Updated 16 ಡಿಸೆಂಬರ್ 2018, 14:45 IST
ನಗರದ ಟೌನ್‌ಹಾಲ್‌ ವೃತ್ತದಲ್ಲಿ ಅಕ್ಷರ ದಾಸೋಹ ನೌಕರರು ಪ್ರತಿಭಟನೆ ನಡೆಸಿದರು
ನಗರದ ಟೌನ್‌ಹಾಲ್‌ ವೃತ್ತದಲ್ಲಿ ಅಕ್ಷರ ದಾಸೋಹ ನೌಕರರು ಪ್ರತಿಭಟನೆ ನಡೆಸಿದರು   

ತುಮಕೂರು: ಅಕ್ಷರ ದಾಸೋಹ ನೌಕರರನ್ನು ಕೆಲಸದಿಂದ ತೆಗೆಯಬಾರದು, ನೌಕರರಿಗೆ ಕನಿಷ್ಠ ಕೂಲಿ ನೀಡಬೇಕು ಹಾಗೂ ಸೇವಾ ನಿಯಮಾವಳಿ ರೂಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಭಾನುವಾರ ನಗರದಲ್ಲಿ ಪ್ರತಿಭಟಿಸಿದರು.

ಪ್ರತಿಭಟನೆಯ ನಂತರ ಅಂಬೇಡ್ಕರ್‌ ಭವನದಲ್ಲಿ ತುಮಕೂರು ಜಿಲ್ಲಾ 3ನೇ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಸಮ್ಮೇಳನ ಉದ್ಘಾಟಿಸಿದ ಸಿಐಟಿಯುನ ರಾಜ್ಯ ಘಟಕದ ಉಪಾಧ್ಯಕ್ಷೆ ಲೀಲಾವತಿ, ‘ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ಬದಲಾಗಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಭಾರತೀಯ ಕಾರ್ಮಿಕರ 15ನೇ ಸಮ್ಮೇಳನದ ನಿರ್ಣಯದಂತೆ ಸ್ಕೀಂ ನೌಕರರನ್ನು ಕಾರ್ಮಿಕರು ಎಂದು ಪರಿಗಣಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅತ್ಯಲ್ಪ ವೇತನದಲ್ಲಿ ದುಡಿಸಿಕೊಂಡು ಶೋಷಿಸುತ್ತಿದೆ’ ಎಂದು ಆರೋ‍ಪಿಸಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಬಿಸಿಯೂಟ ಮಾಡಿ ಬಡಿಸುತ್ತಿರುವ ಬದಲಿಗೆ ಕೇಂದ್ರಿಕೃತ ಅಡುಗೆ ವ್ಯವಸ್ಥೆಗೆ ಮುಂದಾಗುತ್ತಿರುವ ಸರ್ಕಾರದ ಕ್ರಮವನ್ನು ಸಿಐಟಿಯು ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜ. 8 ಮತ್ತು 9 ರಂದು ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಯುವ ಅಖಿಲ ಭಾರತ ಮುಷ್ಕರಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಕ್ಷರ ದಾಸೋಹ ನೌಕರರ ಸಂಘದ ಸುಕನ್ಯಾ, ಅನಸೂಯ, ಕೆಂಚಮ್ಮ, ಲಕ್ಷ್ಮೀ, ಗಿರಿಜಾ, ನಾಗರತ್ನ, ಮಾಳಮ್ಮ, ಕಲಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.