ADVERTISEMENT

ಬಂಡವಾಳಶಾಹಿಗೆ ಮಣೆಹಾಕುವ ಸರ್ಕಾರ; ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 3:10 IST
Last Updated 11 ಸೆಪ್ಟೆಂಬರ್ 2020, 3:10 IST
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿದಂತೆ ರೈತ ವಿರೊಧಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿದಂತೆ ರೈತ ವಿರೊಧಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು   

ಮಧುಗಿರಿ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಪುರಸಭೆ ಆವರಣದಲ್ಲಿ ನೂರಾರು ರೈತರು ಜಮಾವಣೆಗೊಂಡು ಪ್ರಮುಖ ಬೀದಿಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಕೂಗಿದರು. ನಂತರ ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.

ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ.ಶಂಕರಪ್ಪ ಮಾತನಾಡಿ, ‘ಕೇಂದ್ರ ಸರ್ಕಾರ ಬಂಡವಾಳಶಾಹಿಗೆ ಮಣೆ ಹಾಕುತ್ತಿದೆ. ರೈತರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಗೆ ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ನಾಶಪಡಿಸಿ ಖಾಸಗಿ ಕಂಪನಿ ಯಾವ ದರಕ್ಕೆ ಬೇಕಾದರೂ ಕೃಷಿ ಉತ್ಪನ್ನ ಖರೀದಿಸಲು ಸರ್ಕಾರ ಅವಕಾಶ ನೀಡಿದೆ. ಇದನ್ನು ವಿರೋಧಿಸಿ ಸೆಪ್ಟೆಂಬರ್‌ 21ರಂದು ರೈತ ಸಂಘದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು
ಎಂದರು.

ಶಾಸಕ ಎಂ.ವಿ. ವೀರಭದ್ರಯ್ಯ, ಎತ್ತಿನ ಹೊಳೆ ಯೋಜನೆ ಜಾರಿಯಾದರೆ, ತಾಲ್ಲೂಕಿನ 54 ಕೆರೆಗಳಿಗೆ ನೀರು ಹರಿಯಲಿದೆ. ಈ ಯೋಜನೆಗೆ ಸ್ವಾಧೀನಪಡಿಸಿಕೊಂಡ ಕೃಷಿ ಭೂಮಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗೋವಿಂದರಾಜು, ರೈತ ಮುಖಂಡರಾದ ಯತಿರಾಜು, ನಾಗರತ್ನಮ್ಮ, ದೊಡ್ಡಮಾಳಯ್ಯ, ರವೀಶ್, ಕಿ.ಕೆ.ಲಕ್ಷ್ಮಣ್ ಗೌಡ, ಕೆಂಚಪ್ಪ, ವೆಂಕಟೇಶ್, ಸಿ.ಜೆ.ಲೋಕೇಶ್, ಚಿಕ್ಕಣ್ಣ, ಡಿ.ಆರ್. ರಾಜಶೇಖರ್, ಚಿನ್ನಪ್ಪ ರೆಡ್ಡಿ, ವನರಾಜು, ರಾಮೇಗೌಡ, ಟಿ.ಡಿ.ಹನುಮಂತರಾಯಪ್ಪ, ನಾಗರಾಜು, ಭಾಗ್ಯಮ್ಮ, ಲಲಿತಮ್ಮ, ಓಂಪ್ರಕಾಶ್, ರಾಮಕೃಷ್ಣಪ್ಪ, ಟಿ.ಎನ್.ಸುರೇಶ್ ಬಾಬು, ಲಕ್ಷ್ಮೀಪತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.