ADVERTISEMENT

ಹಣವಿಲ್ಲದಿದ್ದರೆ ಶ್ವೇತಪತ್ರ ಹೊರಡಿಸಲಿ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 12:54 IST
Last Updated 10 ಅಕ್ಟೋಬರ್ 2019, 12:54 IST
ಕೊರಟಗೆರೆ ಪಟ್ಟಣದ ಹೊರವಲಯದ ಜಂಪೇನಹಳ್ಳಿ ಕೆರೆ ಕೋಡಿ ಹರಿದ ಹಿನ್ನೆಲೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ್ ಇದ್ದರು 
ಕೊರಟಗೆರೆ ಪಟ್ಟಣದ ಹೊರವಲಯದ ಜಂಪೇನಹಳ್ಳಿ ಕೆರೆ ಕೋಡಿ ಹರಿದ ಹಿನ್ನೆಲೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ್ ಇದ್ದರು    

ಕೊರಟಗೆರೆ: ಸರ್ಕಾರ ವಿಧಾನಸಭಾ ಕಲಾಪಕ್ಕೆ ಮಾಧ್ಯಮದವರಿಗೆ ಅವಕಾಶ ನೀಡದೆ ನಿರ್ಬಂಧ ಹೇರಿರುವುದನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವುದಾಗಿ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಪಟ್ಟಣದ ಜಂಪೇನಹಳ್ಳಿ ಕೆರೆ ತುಂಬಿ ಕೋಡಿ ಹರಿದ ಕಾರಣ ಗುರುವಾರ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

‘ವಿಧಾನಸಭಾ ಕಲಾಪದಲ್ಲಿ ಏನೇನು ಚರ್ಚೆ ಆಗುತ್ತದೆ ಎಂಬುದನ್ನು ರಾಜ್ಯದ ಜನ ಮುಕ್ತವಾಗಿ ನೋಡಲಿ ಎಂಬ ಕಾರಣಕ್ಕೆ ಮಾಧ್ಯಮದವರು ಕಲಾಪದ ದೃಶ್ಯಾವಳಿಗಳನ್ನು ಬಿತ್ತರಿಸುತ್ತಿದ್ದರು. ಆದರೆ, ಬಿಜೆಪಿ ಸರ್ಕಾರ ಕಲಾಪದ ಬಗ್ಗೆ ಸಾರ್ವಜನಿಕರಿಗೆ ತಿಳಿಯುವುದು ಬೇಡ ಎಂಬ ಕಾರಣಕ್ಕೋ ಏನೋ ಮಾಧ್ಯಮದವರ ಮೇಲೆ ನಿರ್ಬಂಧ ಹೇರಿದೆ. ಇದನ್ನು ನಾವು ಖಂಡಿಸುತ್ತೇವೆ. ವಿಧಾನಸಭೆಯಲ್ಲಿ ಆಗುವ ಚರ್ಚೆಗಳು ಸಾರ್ವಜನಿಕರಿಗೆ ಗೊತ್ತಾಗಬೇಕು. ಆಗ ಮಾತ್ರ ಸರ್ಕಾರದ ಆಗುಹೋಗುಗಳು ಹಾಗೂ ವೈಫಲ್ಯಗಳು ಜನರಿಗೆ ಗೊತ್ತಾಗಲಿವೆ. ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ’ ಎಂದರು.

ADVERTISEMENT

‘ಸದನದಲ್ಲಿ ನೆರೆ ಸಂತ್ರಸ್ತರ ನೆರವಿಗೆ ಸಂಬಂಧಿಸಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಹಾಯಕ್ಕೆ ಹೋಗಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಸರ್ಕಾರ ಇಲ್ಲಿವರೆಗೆ ಯಾವುದೇ ಕ್ರಮ ವಹಿಸದೇ ವಿಫಲವಾಗಿದೆ. ಇಷ್ಟು ದಿನ ಕಳೆದರೂ ಕೇಂದ್ರ ಸರ್ಕಾರರಿಂದ ರಾಜ್ಯಕ್ಕೆ ನೆರೆ ಸಂತ್ರಸ್ತರಿಗಾಗಿ ಯಾವುದೇ ಪರಿಹಾರ ಹಣ ಬಂದಿಲ್ಲ’ ಎಂದು ಆರೋಪ ಮಾಡಿದರು.

‘ಸರ್ಕಾರದ ಕೆಲವು ಸಚಿವರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಒಬ್ಬರು ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದರೆ, ಮತ್ತೊಬ್ಬರು ನಮ್ಮಲ್ಲಿ ಹಣ ಇದೆ ಅಭಿವೃದ್ಧಿ ಪಡಿಸುತ್ತೇವೆ ಎಂಬ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ಸರ್ಕಾರದದಲ್ಲಿ ಹಣವಿಲ್ಲ ಎಂದಾದಲ್ಲಿ ಶ್ವೇತಪತ್ರ ಹೊರಡಿಸಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.