ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವು ತಾಲ್ಲೂಕಿನ ಬೀರನಕಲ್ಲು ಗ್ರಾಮದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಗ್ರಾಮೀಣ ಸುಗ್ಗಿ ರಂಗೋತ್ಸವ’ ಯಶಸ್ವಿಯಾಗಿ ನೆರವೇರಿತು.
ಮೊದಲಿಗೆ ರಂಗ ಸೊಗಡು ಕಲಾ ಟ್ರಸ್ಟ್ ವತಿಯಿಂದ ತತ್ವಪದ ಗಾಯನ ನೆರವೇರಿತು. ನಂತರ ಶಿವಕುಮಾರ್ ತಿಮ್ಮಲಾಪುರ ನಿರ್ದೇಶನದ ಸಾಹಿತಿ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ಮತ್ತು ಅನುರಾಗ್ ಭೀಮಸಂದ್ರ ನಿರ್ದೇಶನದ ಶಿವರಾಮ ಕಾರಂತರ ‘ಹೊಟ್ಟೆಯ ಹಾಡು’ ನಾಟಕಗಳನ್ನು ಪ್ರದರ್ಶಿಸಲಾಯಿತು.
ಬೀರನಕಲ್ಲು ಗ್ರಾ.ಪಂ ಸದಸ್ಯ ಸತೀಶ್, ‘ರಂಗಭೂಮಿ ಒಂದು ಪ್ರಬಲ ಮಾಧ್ಯಮ. ವಿಜ್ಞಾನ, ತಂತ್ರಜ್ಞಾನ ಇಲ್ಲದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಒಂದು ಸಂದೇಶವನ್ನು ಮತ್ತೊಬ್ಬರಿಗೆ ತಲುಪಿಸಲು ರಂಗಭೂಮಿ ನೆರವಾಗಿದೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ’ ಎಂದರು.
ರಂಗಭೂಮಿ ಕಲಾವಿದ ನಂಜಪ್ಪಶೆಟ್ಟಿ, ‘ಶಾಲಾ–ಕಾಲೇಜು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೆ ಆಸಕ್ತಿ ಕೊಡಬೇಕು. ಕಲೆ, ಸಾಹಿತ್ಯ, ನೃತ್ಯ, ಗಾಯನದತ್ತ ಗಮನಹರಿಸಬೇಕು. ಇದು ಸಮಗ್ರ ವಿಕಾಸದ ಜತೆಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಸಲಹೆ ಮಾಡಿದರು.
ಸ್ವಾಂದೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಮಹಾಲಕ್ಷ್ಮಿ, ಉಪಾಧ್ಯಕ್ಷ ಲೋಕೇಶ್, ಸದಸ್ಯರಾದ ಮಂಗಳಾ ಪ್ರಕಾಶ್, ಸಾವಿತ್ರಮ್ಮ ಹನುಮಯ್ಯ, ಮುಖಂಡರಾದ ಬಿ.ಜಿ.ರವಿಕುಮಾರ್, ಪಟೇಲ್ ಪ್ರಕಾಶ್, ಪಣಗಾರ್ ಹನುಮಂತ ರಾಯಪ್ಪ, ಸಿದ್ದಲಿಂಗಪ್ಪ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಾಂತರಾಜು, ಎನ್.ಸಿದ್ದರಾಜು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.