
ತುಮಕೂರು: ತಾಲ್ಲೂಕಿನ ದೇವರಾಯನದುರ್ಗದಲ್ಲಿ ಮಂಗಳವಾರ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಗ್ರಹಣದ ಕಾರಣಕ್ಕೆ ಧಾರ್ಮಿಕ ಕೈಂಕರ್ಯಗಳನ್ನು ಬೆಳಿಗ್ಗೆ 11 ಗಂಟೆಯ ಒಳಗೆ ಪೂರ್ಣಗೊಳಿಸಲಾಯಿತು. 11ರ ನಂತರ ತೇರನ್ನು ಎಳೆಯಲಾಯಿತು. ಬೆಳಗಿನ ಜಾವದಿಂದ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು. ಹಲವು ಬಗೆಯ ಹೂವುಗಳಿಂದ ರಥ, ದೇವಾಲಯವನ್ನು ಅಲಂಕರಿಸಲಾಗಿತ್ತು.
ರಥ ಮುಂದಕ್ಕೆ ಸಾಗುತ್ತಿದ್ದಂತೆ ದೇಗುಲದ ಬಳಿ ನೆರೆದಿದ್ದ ಭಕ್ತರು ಹೂ, ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿದರು. ಭಕ್ತರಿಗೆ ಪಾನಕ, ಮಜ್ಜಿಗೆ, ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರ ಸಂಖ್ಯೆ ಕಡಿಮೆ ಇತ್ತು. ಗ್ರಹಣ ಇರುವುದರಿಂದ ತುಂಬಾ ಜನ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಲಿಲ್ಲ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳೂ ಆರಂಭವಾಗಿದ್ದು, ಹಲವರು ರಥೋತ್ಸವದಿಂದ ದೂರ ಉಳಿದಿದ್ದರು.
ಶಾಸಕ ಬಿ.ಸುರೇಶ್‌ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಲ್.ಪುರುಷೋತ್ತಮ್, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ಇತರರು ಲಕ್ಷ್ಮಿನರಸಿಂಹಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.