ADVERTISEMENT

ನಾಗವಲ್ಲಿ ಕೆಪಿಎಸ್‌ ಶಾಲೆಗೆ ನೀಡಿದ್ದ ಅನುದಾನ ವಾಪಸ್‌:ಶಾಸಕ ಬಿ.ಸುರೇಶ್‌ಗೌಡ ಕಿಡಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2024, 6:19 IST
Last Updated 1 ಡಿಸೆಂಬರ್ 2024, 6:19 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ತಾಲ್ಲೂಕಿನ ನಾಗವಲ್ಲಿ ಕೆಪಿಎಸ್‌ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮೀಸಲಿಟ್ಟ ಹಣವನ್ನು ಸರ್ಕಾರ ವಾಪಸ್‌ ಪಡೆದಿದೆ. ಇದು ವಚನ ದ್ರೋಹ, ಕನ್ನಡ ವಿರೋಧಿ ಧೋರಣೆ ಎಂದು ಶಾಸಕ ಬಿ.ಸುರೇಶ್‌ಗೌಡ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹1.21 ಕೋಟಿ ವೆಚ್ಚದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಇದುವರೆಗೆ ಬಿಡಿಗಾಸು ಕೊಟ್ಟಿಲ್ಲ. ಶಿಕ್ಷಣ ಇಲಾಖೆ ಈ ಅನುದಾನ ವಾಪಸ್‌ ತೆಗೆದುಕೊಂಡಿದೆ. ಶಾಲೆಯಲ್ಲಿ 1,113 ಮಕ್ಕಳು ಓದುತ್ತಿದ್ದಾರೆ. ಕೊಠಡಿ, ಶೌಚಾಲಯ ಮುಂತಾದ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಈಗ ಮಕ್ಕಳು ಬೀದಿಯಲ್ಲಿ ಓದುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ದಿವಾಳಿಯಾಗಿದೆ ಎನ್ನುವುದಕ್ಕೆ ಕಾಮಗಾರಿ ಸೂಕ್ತ ಉದಾಹರಣೆ. ಬಿಟ್ಟಿ ಭಾಗ್ಯಗಳನ್ನು ನಿಲ್ಲಿಸಿ ಅಭಿವೃದ್ಧಿಗಾಗಿ ಹಣ ಮೀಸಲಿಡಬೇಕು. ಶಾಸಕರು ಅನುದಾನಕ್ಕೆ ಮನವಿ ಮಾಡಿದರೆ ಅವರಿಗೆ ಉಪಮುಖ್ಯಮಂತ್ರಿ ಶೋಕಾಸ್‌ ನೋಟಿಸ್‌ ನೀಡುವ ಬೆದರಿಕೆ ಹಾಕುತ್ತಿದ್ದಾರೆ. ಇದು ಪ್ರಜಾಪ್ರಭುತ್ವವೇ? ಅಥವಾ ಸರ್ವಾಧಿಕಾರಿ ಆಡಳಿತವೇ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಡಿ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹1,200 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ₹1.21 ಕೋಟಿ ನೀಡದ ಸರ್ಕಾರ ₹1,200 ಕೋಟಿ ಬಿಡುಗಡೆ ಮಾಡುತ್ತದೆಯೇ? ಇದು ಜನರನ್ನು ವಂಚಿಸುವ ಕಾರ್ಯಕ್ರಮ. ಎನ್‌ಡಿಎ ಶಾಸಕರು ಸದರಿ ಕಾರ್ಯಕ್ರಮದಿಂದ ದೂರ ಉಳಿಯುತ್ತೇವೆ. ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.