ADVERTISEMENT

ದುರಾಸೆ ತುಂಬಿದ ಸಮಾಜ: ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ

ವಿ.ವಿಯಲ್ಲಿ ಮಧ್ಯಾಹ್ನ ಭೋಜನ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 15:51 IST
Last Updated 6 ಮಾರ್ಚ್ 2023, 15:51 IST
ತುಮಕೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಪಾವಗಡ ರಾಮಕೃಷ್ಣ ಸೇವಾಶ್ರಮ ಮತ್ತು ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯಿಂದ ಆಯೋಜಿಸಿದ್ದ ಮಧ್ಯಾಹ್ನ ಭೋಜನ ಯೋಜನೆಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಎನ್‌. ಸಂತೋಷ್ ಹೆಗ್ಡೆ, ಪ್ರೊ.ಎಂ. ವೆಂಕಟೇಶ್ವರಲು, ಜಪಾನಂದ ಸ್ವಾಮೀಜಿ, ನಹಿದಾ ಜಮ್‌ ಜಮ್‌ ಇದ್ದಾರೆ
ತುಮಕೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಪಾವಗಡ ರಾಮಕೃಷ್ಣ ಸೇವಾಶ್ರಮ ಮತ್ತು ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯಿಂದ ಆಯೋಜಿಸಿದ್ದ ಮಧ್ಯಾಹ್ನ ಭೋಜನ ಯೋಜನೆಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಎನ್‌. ಸಂತೋಷ್ ಹೆಗ್ಡೆ, ಪ್ರೊ.ಎಂ. ವೆಂಕಟೇಶ್ವರಲು, ಜಪಾನಂದ ಸ್ವಾಮೀಜಿ, ನಹಿದಾ ಜಮ್‌ ಜಮ್‌ ಇದ್ದಾರೆ   

ತುಮಕೂರು: ‘ಸ್ವಾಮೀಜಿಗಳು ಮೀಸಲಾತಿ ಕೇಳುವುದಕ್ಕಿಂತ ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿದರೆ, ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದಲ್ಲಿ ಸೋಮವಾರ ಪಾವಗಡ ರಾಮಕೃಷ್ಣ ಸೇವಾಶ್ರಮ ಮತ್ತು ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ರಾಷ್ಟ್ರದ ಜನಸಂಖ್ಯೆಯಲ್ಲಿ ಶೇ 14.8ರಷ್ಟು ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ಕೆಲವರು ತಮ್ಮ ಅಗತ್ಯಕ್ಕೂ ಮೀರಿ ಹಲವು ಪದಾರ್ಥಗಳನ್ನು ಸಂಗ್ರಹಿಸಿರುವುದರಿಂದ ಹಸಿವಿನ ಸಮಸ್ಯೆ ಉಲ್ಬಣಗೊಂಡಿದೆ. ದುರಾಸೆ ತುಂಬಿದ ಸಮಾಜವನ್ನು ಬದಲಾಯಿಸಬೇಕಾಗಿದೆ ಎಂದರು.

ADVERTISEMENT

ಮಕ್ಕಳಿಗೆ ಒಳ್ಳೆಯ ಮಾತುಗಳನ್ನು ಹೇಳುವವರು ಇಲ್ಲ. ಪೋಷಕರಿಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಹಿರಿಯರು ವೃದ್ಧಾಶ್ರಮ ಸೇರಿದ್ದಾರೆ. ಮಕ್ಕಳಿಗೆ ಸರಿ, ತಪ್ಪುಗಳ ಬಗ್ಗೆ ತಿಳಿಸುತ್ತಿಲ್ಲ. ಇಂದು ನಮ್ಮ ಕಾಲಕ್ಕಿಂತ ನೂರು ಪಟ್ಟು ಉತ್ತಮ ಶಿಕ್ಷಣ ಸಿಗುತ್ತಿದೆ. ಅದರಿಂದ ಪ್ರಯೋಜನ ಏನು? ಬಾಂಬ್‌ ತಯಾರಿ ಹೇಗೆ ಎಂಬುದು ತಿಳಿಸುತ್ತಾರೆ. ಯಾವುದಕ್ಕೆ ಬಳಸಬೇಕು ಎನ್ನುವುದನ್ನು ಹೇಳಿಕೊಡುವುದಿಲ್ಲ ಎಂದು ಹೇಳಿದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ‘ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಇದೆ. ಆದರೆ, ಪೌಷ್ಟಿಕಾಂಶ ಯುಕ್ತ ಆಹಾರ ಸಿಗುತ್ತಿಲ್ಲ. ಎಲ್ಲರೂ ಸ್ಥಳೀಯ ಆಹಾರ ಪದಾರ್ಥಗಳಿಗೆ ಪ್ರೋತ್ಸಾಹ ನೀಡಿದರೆ ರೈತರಿಗೂ ಅನುಕೂಲವಾಗಲಿದೆ. ಆರೋಗ್ಯಕರ ಸಮಾಜಕ್ಕೆ ಸ್ಥಳೀಯ, ಪೂರ್ವಜರು ಅನುಸರಿಸಿದ ಆಹಾರ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಲ್ಲ ಕಡೆಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚಿದ್ದು, ಎಲ್ಲರ ಆರೋಗ್ಯ ಮತ್ತು ರೈತರ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ರಸ್ತೆ ಪಕ್ಕದಲ್ಲಿಯೇ ಕಸದ ರಾಶಿ ಹಾಕುತ್ತಿದ್ದಾರೆ. ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಜ್ಞಾನ ಮತ್ತು ಅನ್ನಕ್ಕೆ ಒತ್ತು ಕೊಡಲಾಗುತ್ತಿದೆ. ಈ ನಾಡಿನ ಗುಣವೇ ಅಂಥದ್ದು’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ನಿವೃತ್ತ ನ್ಯಾಯಮೂರ್ತಿ ರತ್ನಕಲಾ, ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ಮಾತನಾಡಿದರು. ಕುಲಸಚಿವೆ ನಹಿದಾ ಜಮ್‌ ಜಮ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.