ADVERTISEMENT

ಉಸಿರು ನಿಂತವರ ಹೆಸರಿನಲ್ಲಿ ಹಸಿರು: ಸಸಿ ನೆಡುವ ಕಾರ್ಯಕ್ಕೆ ಕಾಂಗ್ರೆಸ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 3:40 IST
Last Updated 15 ಆಗಸ್ಟ್ 2021, 3:40 IST
ಮಧುಗಿರಿ ತಾಲ್ಲೂಕು ಜಡೇಗೊಂಡನಹಳ್ಳಿಯಲ್ಲಿ ಉಸಿರು ನಿಂತವರ ಹೆಸರಿನಲ್ಲಿ ಹಸಿರು ಬೆಳೆಸುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಸಿದ್ದರಬೆಟ್ಟದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು
ಮಧುಗಿರಿ ತಾಲ್ಲೂಕು ಜಡೇಗೊಂಡನಹಳ್ಳಿಯಲ್ಲಿ ಉಸಿರು ನಿಂತವರ ಹೆಸರಿನಲ್ಲಿ ಹಸಿರು ಬೆಳೆಸುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಸಿದ್ದರಬೆಟ್ಟದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು   

ಮಧುಗಿರಿ: ಪ್ರತಿಯೊಬ್ಬರು ಗಿಡ, ಮರಗಳನ್ನು ಬೆಳೆಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.

ತಾಲ್ಲೂಕಿನ ಜಡೇಗೊಂಡನ ಹಳ್ಳಿಯಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಕೋವಿಡ್‌ನಿಂದ ಮೃತಪಟ್ಟವರ ಸ್ಮರಣಾರ್ಥ ‘ಉಸಿರು ನಿಂತವರ ಹೆಸರಿನಲ್ಲಿ ಹಸಿರು ಬೆಳೆಸುವ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

ಭೂಮಿಯ ತಾಪಮಾನ ಹೆಚ್ಚಾಗಿ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನ ನಿಯಂತ್ರಿಸಿ ಪರಿಸರದ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಗಿಡ, ಮರ ಬೆಳೆಸಬೇಕು ಎಂದರು.

ADVERTISEMENT

ಪರಿಸರ ಶೇ 70ರಷ್ಟು ಕಲುಷಿತಗೊಂಡಿದೆ. ಹೆಚ್ಚು ಗಿಡ, ಮರಗಳನ್ನು ಬೆಳಸುವ ಮೂಲಕ ನೈಸರ್ಗಿಕ ಆಮ್ಲಜನಕ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಸಿದ್ಧರಬೆಟ್ಟದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೆ.ಎನ್.ರಾಜಣ್ಣ ಅವರ ಸಮಾಜ ಮುಖಿ ಚಿಂತನೆಯ ಫಲವಾಗಿ ಸಸಿ ನೆಡುವ ಈ ಕಾರ್ಯಕ್ರಮ ರಾಜ್ಯದಲ್ಲೇ ಮೊದಲ ಬಾರಿಗೆ ಈ ಗ್ರಾಮದಲ್ಲಿ ನಡೆದಿದೆ. ಮಹಾಗನಿ ಗಿಡಗಳನ್ನು ಬೆಳಸುವುದರಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ. ಈ ಕುರಿತು ರೈತರಿಗೆ ಕಾರ್ಯಾಗಾರ ನಡೆಸಿ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು
ಎಂದರು.

ಮಧುಗಿರಿ ಕ್ಷೇತ್ರದ 248 ಬೂತ್ ಮಟ್ಟದ ಸರ್ಕಾರಿ ಜಾಗ, ರಸ್ತೆ, ಮೈದಾನ ಸೇರಿದಂತೆ ಹಲವು ಕಡೆಗಳಲ್ಲಿ ಬೇವು, ಹಲಸು, ಹೊಂಗೆ, ಗಸಗಸೆ, ನೇರಳೆ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.

ಸ್ವಾತಂತ್ರ್ಯ ಹೋರಾಟಗಾರ ಶಂಕರಪ್ಪ ಅವರನ್ನು ಅಭಿನಂದಿಸಲಾಯಿತು.

ಕ್ರಿಬ್ಕೊ ನಿರ್ದೇಶಕ ಆರ್.ರಾಜೇಂದ್ರ, ಸಹಕಾರ ಮಹಾ ಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಬಿ.ನಾಗೇಶಬಾಬು, ಜಿ.ಎನ್.ಮೂರ್ತಿ, ಜಿ.ಪಂ.ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ರಾಜಗೋಪಾಲ್, ತಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ, ಮಾಜಿ ಸದಸ್ಯ ರಾಜು, ಪುರಸಭೆ ಮಾಜಿ ಅಧ್ಯಕ್ಷಎಂ.ಕೆ.ನಂಜುಂಡಯ್ಯ, ಕೆ.ಪ್ರಕಾಶ್, ಅಯೂಬ್, ಸದಸ್ಯ ಮಂಜುನಾಥ್,

ಕಾಂಗ್ರೆಸ್ ಉಪಾಧ್ಯಕ್ಷ ಸುವರ್ಣಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.