ADVERTISEMENT

ತುಮಕೂರು: ಒಣಗಿ ಹಾಳಾದ ‘ಹಸಿರು ಗ್ರಾಮ’ ಯೋಜನೆಯಡಿ ನೆಟ್ಟ 10 ಸಾವಿರ ಗಿಡ!

3.50 ಲಕ್ಷ ಗಿಡ ನೆಟ್ಟರೂ ಸಂರಕ್ಷಣೆಯೇ ಸವಾಲು; ಅರಣ್ಯ ಇಲಾಖೆ, ಗ್ರಾ.ಪಂ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:20 IST
Last Updated 8 ಜುಲೈ 2025, 6:20 IST
ತುಮಕೂರಿನಲ್ಲಿ ರಸ್ತೆ ಬದಿ ಗಿಡ ನೆಟ್ಟಿರುವುದು
ತುಮಕೂರಿನಲ್ಲಿ ರಸ್ತೆ ಬದಿ ಗಿಡ ನೆಟ್ಟಿರುವುದು   

ತುಮಕೂರು: ಜಿಲ್ಲೆಯ ಹಸಿರು ಹೊದಿಕೆ ಹೆಚ್ಚಳಕ್ಕೆ ರೂಪಿಸಿದ್ದ ‘ಹಸಿರು ಗ್ರಾಮ’ ಯೋಜನೆಯಡಿ ನೆಟ್ಟ 10 ಸಾವಿರಕ್ಕೂ ಹೆಚ್ಚು ಗಿಡಗಳು ಒಂದೇ ವರ್ಷದಲ್ಲಿ ಒಣಗಿ ಹಾಳಾಗಿವೆ.

2024ರ ಪರಿಸರ ದಿನಾಚರಣೆ ಸಮಯದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿಯು ಯೋಜನೆ ಜಾರಿಗೊಳಿಸಿತ್ತು. ಜಿಲ್ಲೆಯಾದ್ಯಂತ 5 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿತ್ತು. ಇದರಲ್ಲಿ 3,50,691 ಸಸಿ ನೆಟ್ಟಿದ್ದು, ಅದರಲ್ಲಿ 10,619 ಸಸಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮತ್ತೆ ಈ ವರ್ಷವೂ ಜೂನ್ ತಿಂಗಳಲ್ಲಿ ಪರಿಸರ ದಿನಾಚರಣೆ ಸಮಯದಲ್ಲಿ ಗಿಡ ನೆಡಲಾಗಿದೆ. ಆದರೆ ಅವುಗಳ ರಕ್ಷಣೆ, ಉಳಿದು, ಬೆಳೆಯುತ್ತಿವೆಯೇ? ಎಂದು ಯಾರೊಬ್ಬರೂ ಗಮನಿಸುವುದಿಲ್ಲ.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಸಾವಿರ ಗಿಡ ನೆಡುವ ಉದ್ದೇಶ ಇತ್ತು. ಗಿಡ ನೆಡುವ ಕಾರ್ಯವೂ ಸಮರ್ಪಕವಾಗಿ ಆಗಿಲ್ಲ. ನೆಟ್ಟ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಗಿಡ ಒಣಗಿದ ಜಾಗದಲ್ಲಿ ಹೊಸದಾಗಿ ಮತ್ತೊಂದು ಗಿಡ ನೆಟ್ಟಿದ್ದಾರೆ.

ADVERTISEMENT

ಮಹಾಗನಿ, ಹೊಂಗೆ, ಹೊನ್ನೆ, ಹಲಸು, ನೇರಳೆ, ಹುಣಸೆ, ಬೇವು, ಬಾದಾಮಿ, ಕಾಡು ಬಾದಾಮಿ, ಸೀತಾಫಲ ಸೇರಿ ಒಟ್ಟು 47 ಬಗೆಯ ಸಸಿಗಳನ್ನು ನೆಡಲಾಗಿದೆ. ಶಾಲೆ, ಸ್ಮಶಾನ, ರಸ್ತೆ ಬದಿ, ಸಾರ್ವಜನಿಕರ ಸ್ಥಳಗಳಲ್ಲಿ ಸಸಿ ಹಾಕಲಾಗಿದೆ. ಇದಕ್ಕಾಗಿ ಜಿಲ್ಲೆಯ 14 ನರ್ಸರಿಗಳಲ್ಲಿ ಹೊಸದಾಗಿ 3.68 ಲಕ್ಷ ಗಿಡ ಬೆಳೆಸಲಾಗಿತ್ತು. ಇದರಲ್ಲಿ 9,020 ಗಿಡಗಳು ಇನ್ನೂ ನರ್ಸರಿಯಲ್ಲಿಯೇ ಉಳಿದಿವೆ.

ಗ್ರಾಮ ಪಂಚಾಯಿತಿ ಮತ್ತು ಸಾಮಾಜಿಕ ಅರಣ್ಯ ಇಲಾಖೆಗೆ ಗಿಡ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿತ್ತು. ಗಿಡಗಳನ್ನು ಒಂದೂವರೆ ವರ್ಷ ನರ್ಸರಿಯಲ್ಲಿ ಆರೈಕೆ ಮಾಡಿ ನಂತರ ಜಿಲ್ಲೆಯ ವಿವಿಧೆಡೆ ನೆಡಲಾಗಿದೆ. 12ರಿಂದ 13 ಅಡಿ ಎತ್ತರಕ್ಕೆ ಬೆಳೆದಿದ್ದ ಗಿಡ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀರಿನ ಕೊರತೆ, ಗಿಡದ ಸುತ್ತ ಬೇಲಿ ಅಳವಡಿಸದೆ ಇರುವುದು, ನೀರಿನ ಇಂಗುವಿಕೆ ಕಡಿಮೆ ಇರುವ ಪ್ರದೇಶದಲ್ಲಿನ ಗಿಡಗಳು ಒಣಗಿ ಹೋಗಿವೆ. ನಿರ್ವಹಣೆ ಮಾಡಿ, ಗಿಡಗಳನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯಲ್ಲಿಯೇ ಅತಿ ಹೆಚ್ಚು 50 ಸಾವಿರ ಗಿಡಗಳನ್ನು ತುರುವೇಕೆರೆ ತಾಲ್ಲೂಕಿನಲ್ಲಿ ನೆಡಲಾಗಿತ್ತು. ಇದರಲ್ಲಿ 1,520 ಗಿಡ ಉಳಿದಿಲ್ಲ. ಪ್ರತಿ ವರ್ಷ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಲಕ್ಷಾಂತರ ಸಸಿಗಳನ್ನು ನೆಡಲಾಗುತ್ತಿದೆ. ಆದರೆ ಅವುಗಳ ಆರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಜವಾಬ್ದಾರಿ ತೆಗೆದುಕೊಂಡ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಿಡ ಮರವಾಗಿ ಬೆಳೆಯುತ್ತಿಲ್ಲ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಿದ್ದಾರೆ.

‘ಗ್ರಾಮೀಣ ಮಟ್ಟದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಸಿ ಸಂರಕ್ಷಣೆಗೆ ಕ್ರಮ ವಹಿಸಬೇಕು. ಅವರ ಬೇಜವಾಬ್ದಾರಿತನದಿಂದ ಹಸಿರೀಕರಣ ಪ್ರಮಾಣ ಹೆಚ್ಚಾಗುತ್ತಿಲ್ಲ. ಇಲಾಖೆಗಳು ಎಷ್ಟೇ ಪ್ರಯತ್ನ ಪಟ್ಟರೂ ತಳಮಟ್ಟದಲ್ಲಿ ಗಿಡ ಉಳಿಸುವ ಕೆಲಸವಾಗುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸಸಿ ನೆಟ್ಟು ಸುಮ್ಮನಾಗುತ್ತಾರೆ. ಅವುಗಳ ಪಾಲನೆ, ಆರೈಕೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಗಿಡಗಳು ಉಳಿಯುತ್ತಿಲ್ಲ’ ಎಂದು  ಪರಿಸರವಾದಿ ಬಿ.ವಿ.ಗುಂಡಪ್ಪ ಪ್ರತಿಕ್ರಿಯಿಸಿದರು.

ಶೇ 20ರಷ್ಟು ಗಿಡ ಉಳಿಯುತ್ತಿಲ್ಲ

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಜೀವ ವೈವಿಧ್ಯ ನಿರ್ವಹಣಾ ಸಮಿತಿ’ ರಚಿಸಲಾಗಿದೆ. ಗಿಡಗಳ ರಕ್ಷಣೆ ಮತ್ತು ಪೋಷಣೆ ಸಮಿತಿಯ ಜವಾಬ್ದಾರಿ. ಗ್ರಾ.ಪಂ ಅಧ್ಯಕ್ಷರು ಸೇರಿದಂತೆ ಇಡೀ ಆಡಳಿತ ವರ್ಗವೇ ಸಮಿತಿಯಲ್ಲಿ ಇರುತ್ತದೆ. ಬಹುತೇಕ ಕಡೆಗಳಲ್ಲಿ ಸಮಿತಿ ಕಾರ್ಯ ಆಶಾದಾಯಕವಾಗಿಲ್ಲ. ಹೀಗಾಗಿ ಎಷ್ಟೇ ಗಿಡ ನೆಟ್ಟರೂ ಶೇ 20ರಷ್ಟು ಕೂಡ ಉಳಿಯುತ್ತಿಲ್ಲ. ಬಿ.ವಿ.ಗುಂಡಪ್ಪ ಪರಿಸರವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.