ADVERTISEMENT

ಶೇಂಗಾ ಬೆಳೆಗೆ ಸಿಗದ ‘ಜಿಪ್ಸಂ’

ಇಳುವಳಿ ಕುಸಿಯುವ ಭೀತಿಯಲ್ಲಿ ಬೆಳೆಗಾರರು

ಕೆ.ಜೆ.ಮರಿಯಪ್ಪ
Published 4 ಆಗಸ್ಟ್ 2020, 5:33 IST
Last Updated 4 ಆಗಸ್ಟ್ 2020, 5:33 IST
ಶೇಂಗಾ ಬೆಳೆ
ಶೇಂಗಾ ಬೆಳೆ   

ತುಮಕೂರು: ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಮಾಡಿರುವ ರೈತರು ಮೇಲು ಗೊಬ್ಬರವಾಗಿ ‘ಜಿಪ್ಸಂ’ ನೀಡಲಾಗದೆ ಕೈಹಿಸುಕಿಕೊಳ್ಳುತ್ತಿದ್ದಾರೆ. ಗೊಬ್ಬರಕ್ಕಾಗಿ ಅಂಗಡಿಯಿಂದ ಅಂಗಡಿಗೆ ಅಲೆಯುತ್ತಿದ್ದರೂ ‘ಜಿಪ್ಸಂ’ ಸಿಗುತ್ತಿಲ್ಲ.

ಕಳೆದ ಎರಡು ವಾರಗಳ ಹಿಂದೆಯೇ ಜಿಲ್ಲೆಯಲ್ಲಿ ಜಿಪ್ಸಂ ಕೊರತೆ ಕಾಣಿಸಿಕೊಂಡಿದ್ದರೂ ಈವರೆಗೂ ತರಿಸಲು ಸಾಧ್ಯವಾಗಿಲ್ಲ. ಇನ್ನೂ ಒಂದೆರಡು ದಿನಗಳಲ್ಲಿ ಬರಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ‘ಯಾವಾಗ ಬರುವುದು, ನಾವು ಯಾವಾಗ ಗೊಬ್ಬರ ಹಾಕುವುದು. ಸಮಯ ಮೀರಿದರೆ ಇಳುವರಿ ಕುಂಠಿತವಾಗಲಿದೆ’ ಎಂಬ ಆತಂಕದಲ್ಲಿ ರೈತರು ತೊಳಲಾಡುತ್ತಿದ್ದಾರೆ.

ಶೇಂಗಾ ಬಿತ್ತನೆ ಮಾಡಿದ 40–45 ದಿನಗಳ ಒಳಗೆ ಜಿಪ್ಸಂ ಗೊಬ್ಬರ ನೀಡಬೇಕು. ಸಕಾಲಕ್ಕೆ ಮೇಲು ಗೊಬ್ಬರ ಕೊಟ್ಟರೆ ಉತ್ತಮ ಇಳುವರಿ ಪಡೆಯಬಹುದು. ಜಿಪ್ಸಂನಿಂದ ಮಣ್ಣು ಸಡಿಲವಾಗಿ ಗಿಡದ ಬೇರು ಆಳಕ್ಕೆ ಇಳಿಯಲು ಸಹಕಾರಿ ಆಗುತ್ತದೆ. ಇದರಿಂದಾಗಿ ಶೇಂಗಾ ಕಾಯಿ ಸದೃಢವಾಗಿ ಇಳುವರಿ ಹೆಚ್ಚುತ್ತದೆ. ಬೀಜದಲ್ಲಿ ಎಣ್ಣೆ ಅಂಶ ವೃದ್ಧಿಸಲು ನೆರವಾಗುತ್ತದೆ. ಕಾಯಿಸದೃಢವಾಗದಿದ್ದರೆ ಇಳುವರಿ ತೀವ್ರವಾಗಿ ಕುಸಿಯುತ್ತದೆ.

ADVERTISEMENT

ಒಂದು ಪಲ್ಲದ ಚೀಲಕ್ಕೆ ಕಾಯಿ ತುಂಬಿದರೆ 50ರಿಂದ 60 ಕೆ.ಜಿ ತೂಕ ಬರಬೇಕು. ಜಿಪ್ಸಂ ಹಾಕಿದರೆ ಈ ಪ್ರಮಾಣದ ಇಳುವರಿ ನಿರೀಕ್ಷಿಸಬಹುದು. ಇಲ್ಲವಾದರೆ ಒಂದು ಚೀಲ 25–30 ಕೆ.ಜಿ.ಯೂ ತೂಗುವುದಿಲ್ಲ. ಇಳುವರಿ ಕುಸಿತದ ಜತೆಗೆ ಸರಿಯಾದ ಬೆಲೆಯೂ ಸಿಗುವುದಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

‘ಈಗಾಗಲೇ ಶೇಂಗಾ ಬಿತ್ತನೆಯಾಗಿ 45 ದಿನಗಳು ಕಳೆದಿವೆ. ಜಿಪ್ಸಂ ಗೊಬ್ಬರಕ್ಕಾಗಿ ಅಲೆದಾಟ ನಡೆಸಿ ಸುಸ್ತಾಗಿದ್ದೇವೆ. ಇನ್ನೂ ಒಂದೆರಡು ದಿನಗಳಲ್ಲಿ ಗೊಬ್ಬರ ಹಾಕಿದರೆ ತಕ್ಕಮಟ್ಟಿಗೆ ಇಳುವರಿ ನಿರೀಕ್ಷಿಸಬಹುದು. ತಡವಾದರೆ ಉತ್ತಮ ಬೆಳೆ ಬಂದರೂ ಇಳುವರಿ ಕುಸಿಯಲಿದೆ. ಈ ಬಾರಿ ಸಕಾಲಕ್ಕೆ ಮಳೆಯಾಗಿದ್ದು, ಬಿತ್ತನೆಯೂ ಚೆನ್ನಾಗಿ ನಡೆದಿದೆ. ಆದರೆ ಗೊಬ್ಬರವೇ ಸಿಗುತ್ತಿಲ್ಲ. ಹಲ್ಲು ಇದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲು ಇಲ್ಲ ಎಂಬಂತಾಗಿದೆ ನಮ್ಮ ಸ್ಥಿತಿ’ ಎಂದು ಪಾವಗಡ ತಾಲ್ಲೂಕು ಅಚ್ಚಮ್ಮನಹಳ್ಳಿ ರೈತ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿತ್ತನೆ– ಉತ್ಪಾದನೆ ಹೆಚ್ಚಳ: ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿದೆ. ನಗರಗಳಿಗೆ ವಲಸೆ ಹೋಗಿದ್ದವರೂ ಹಳ್ಳಿಗಳಿಗೆ ವಾಪಸಾಗಿ ಕೃಷಿ ಚಟುವಟಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಶೇಂಗಾ ಬೆಳೆಯುವ ಪ್ರದೇಶಗಳಲ್ಲಿ ಬಿತ್ತನೆ ಪ್ರಮಾಣವೂ ಹೆಚ್ಚಾಗಿದೆ. ಮನೆಯವರ ಜತೆಗೆ ನಗರದಿಂದ ಬಂದವರೂ ಕೃಷಿಯಲ್ಲಿ ಕೈಜೋಡಿಸಿದ್ದು, ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ರೋಗ ಬಾಧೆ: ಈಗಾಗಲೇ ಸುರುಳಿ ಪೂಚಿ, ಸಸ್ಯ ಹೇನು, ಗೊಣ್ಣೆಹುಳು, ಕೆಂಪುತಲೆ ಕಂಬಳಿ ಹುಳು, ಕತ್ತು ಕೊಳೆ ರೋಗ, ಎಲೆ ಚುಕ್ಕೆ, ಬೇರು ಕೊಳೆ ರೋಗ ಅಲ್ಲಲ್ಲಿ ಕಾಣಿಸಿಕೊಂಡಿದೆ. ಜಿಪ್ಸಂ ಗೊಬ್ಬರ ಹಾಕಿದ್ದರೆ ಗಿಡ ಚೇತರಿಸಿಕೊಂಡು, ರೋಗ ಬಾಧೆ ನಿಯಂತ್ರಿಸಲು ಸಾಧ್ಯವಾಗುತಿತ್ತು. ಎಲ್ಲೂ ಗೊಬ್ಬರವೇ ಸಿಗುತ್ತಿಲ್ಲ ಎನ್ನುತ್ತಾರೆ ರೈತರು.

ಲಕ್ಷ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ

ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಪ್ರಮುಖವಾಗಿ ಶೇಂಗಾ ಬೆಳೆಯಲಾಗುತ್ತದೆ. ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ತಾಲ್ಲೂಕಿನ ಜತೆಗೆ ತುಮಕೂರು ತಾಲ್ಲೂಕಿನ ಅರ್ಧದಷ್ಟು ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ.

ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ಹೇಳಲಾಗುತ್ತಿದ್ದು, ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ಒಂದೆರಡು ದಿನ ಬೇಕು

ನಾಲ್ಕೈದು ದಿನಗಳ ಹಿಂದೆ ಜಿಪ್ಸಂ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಇನ್ನೂ ಒಂದೆರಡು ದಿನಗಳಲ್ಲಿ ಬರಬಹುದು. ಕೋವಿಡ್ ಕಾರ್ಯದಿಂದಾಗಿ ಗಮನಕೊಡಲು ಸಾಧ್ಯವಾಗಿಲ್ಲ. ಜಿಲ್ಲೆಗೆ 1500 ಟನ್ ಸಿಪ್ಸಂ ಬರಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.