
ಗುಬ್ಬಿ: ಗುಬ್ಬಿಯ ಗೋಸಲ ಚನ್ನಬಸವೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಗುರುವಾರ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ರಥೋತ್ಸವ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಮೂರ್ತಿಗೆ ಗಂಗಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ, ಎಳನೀರು, ಗಂಧದ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ತುಂಬೆ ಹೂವಿನ ಅರ್ಚನೆ ಮಾಡಿ, ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
18 ಕೋಮಿನ ಮುಖಂಡರು, ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳಾರತಿ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಲಿಂಗದವೀರರು ಹಾಗೂ ನಂದಿದ್ವಜ ಕುಣಿತಗಳೊಂದಿಗೆ ತಂದು ಪುಷ್ಪಾಲಂಕೃತ ರಥದಲ್ಲಿ ಕೂರಿಸಲಾಯಿತು. ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಿಸಿಲಿನ ನಡುವೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ರಥ ಸಾಗಿದಂತೆ ಭಕ್ತರು ಜಯಘೋಷ ಕೂಗಿದರು. ದವನ ಚುಚ್ಚಿದ ಬಾಳೆಹಣ್ಣುಗಳನ್ನು ಕಳಸಕ್ಕೆ ಎಸೆದು ಹರಕೆ ತೀರಿಸಿದರು. ರಥೋತ್ಸವದ ನಂತರ ಭಕ್ತರು ದೇವರ ಮೂರ್ತಿಗೆ ಹಣ್ಣುಕಾಯಿ, ಪೂಜೆ ಸಲ್ಲಿಸಿದರು. ಭಕ್ತರಿಗೆ ಪಾನಕ, ಫಲಹಾರ, ಕೋಸಂಬರಿ, ಮಜ್ಜಿಗೆ ವಿತರಿಸಿದರು. ಅನ್ನದಾಸೋಹ ನಡೆಯಿತು.
18 ಕೋಮಿನ ಮುಖಂಡರು, ತಾಲ್ಲೂಕು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು.
ರಾತ್ರಿ ಸ್ಥಳೀಯ ಕಲಾವಿದರಿಂದ ‘ಸಂಪೂರ್ಣ ರಾಮಾಯಣ’ ಪೌರಾಣಿಕ ನಾಟಕ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.