ADVERTISEMENT

ನಮ್ಮ ಪಕ್ಷದ ಅಭ್ಯರ್ಥಿಗೇ ನನ್ನ ಮತ: ಜೆಡಿಎಸ್ ಶಾಸಕ ಸ್ಪಷ್ಟನೆ

ದುಬೈನಲ್ಲಿ ಜೆಡಿಎಸ್‌ ಶಾಸಕ ಡಿ.ಸಿ.ಗೌರಿಶಂಕರ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 10:30 IST
Last Updated 9 ಜೂನ್ 2022, 10:30 IST
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್    

ತುಮಕೂರು: ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡು, ಎಚ್.ಡಿ.ಕುಮಾರಸ್ವಾಮಿ ಜತೆಗೆ ಮುನಿಸಿಕೊಂಡಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌ನಿಂದ ದೂರವಾಗಿದ್ದು, ಪಕ್ಷದ ಅಭ್ಯರ್ಥಿಗೆ ಮತ ಹಾಕುವುದು ಅನುಮಾನ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದ ಅವರು, ‘ಜೆಡಿಎಸ್‌ನಿಂದ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಕುಪೇಂದ್ರ ರೆಡ್ಡಿ ಅವರು ಮತ ಕೇಳಿದ್ದಾರೆ. ಹಾಗಾಗಿ ಅವರಿಗೆ ಮತ ನೀಡುತ್ತೇನೆ’ ಎಂದು ಹೇಳಿದರು.

‘ಪಕ್ಷದ ಯಾವ ನಾಯಕರೂ ನನ್ನನ್ನು ಮತ ನೀಡುವಂತೆ ಕೇಳಿಲ್ಲ. ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಯಾರೊಬ್ಬರೂ ಸಂಪರ್ಕಿಸಿಲ್ಲ. ಶಾಸಕರ ಸಭೆಗೂ ಆಹ್ವಾನಿಸಿಲ್ಲ. ಸಭೆಗೂ ಹೋಗುತ್ತಿಲ್ಲ. ಆದರೆ ಜೆಡಿಎಸ್‌ಗೆ ಮತ ನೀಡುವುದು ನನ್ನ ಕರ್ತವ್ಯ’ ಎಂದು ತಿಳಿಸಿದರು.

ADVERTISEMENT

ವಿದೇಶದಲ್ಲಿ ಗೌರಿಶಂಕರ್: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್, ಕುಟುಂಬ ಸಮೇತರಾಗಿ ದುಬೈ ಪ್ರವಾಸಕ್ಕೆ ತೆರಳಿದ್ದಾರೆ. ರಾಜ್ಯಸಭೆ ಚುನಾವಣೆಯಿಂದ ದೂರ ಉಳಿಯುವ ಸಲುವಾಗಿ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.

‘ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಪ್ರವಾಸ ನಿಗದಿಯಾಗಿತ್ತು. ಹಾಗಾಗಿ ವಿದೇಶಕ್ಕೆ ಬಂದಿದ್ದೇನೆ. ಗುರುವಾರ ರಾತ್ರಿ ಬೆಂಗಳೂರಿಗೆ ವಾಪಸಾಗುತ್ತಿದ್ದು, ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಜತೆಯಲ್ಲೇ ಮತ ಹಾಕುತ್ತೇನೆ’ ಎಂದು ಅವರು ದುಬೈನಿಂದ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.