ADVERTISEMENT

ಅಕಾಲಿಕ ಮಳೆ; 23ಕ್ಕೆ ಗೂಳೂರು ಗಣೇಶ ವಿಸರ್ಜನೆ

ಎರಡನೇ ಬಾರಿ ವಿಸರ್ಜನಾ ಮಹೋತ್ಸವ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 4:08 IST
Last Updated 9 ಜನವರಿ 2021, 4:08 IST
ಗೂಳೂರು ಗಣೇಶ ಭಕ್ತಮಂಡಳಿ ಸಭೆಯಲ್ಲಿ ಮಂಡಳಿ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು
ಗೂಳೂರು ಗಣೇಶ ಭಕ್ತಮಂಡಳಿ ಸಭೆಯಲ್ಲಿ ಮಂಡಳಿ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು   

ತುಮಕೂರು: ಅಕಾಲಿಕ ಮಳೆ ಕಾರಣ ಜ. 9 ಮತ್ತು 10 ನಡೆಯಬೇಕಿದ್ದ ಗೂಳೂರು ಗಣೇಶ ಜಾತ್ರೆಯನ್ನು ಮುಂದೂಡಲಾಗಿದೆ.

ಗೂಳೂರಿನ ಗಣೇಶ ದೇವಾಲಯದಲ್ಲಿ ಶುಕ್ರವಾರ ಗ್ರಾಮದ 18 ಕೋಮಿನ ಜನರು ಸಭೆಸೇರಿ ಮಳೆ ಆಗುತ್ತಿರುವುದರಿಂದ ಜಾತ್ರೆಗೆ ಅಡಚಣೆ ಆಗುತ್ತದೆ ಎಂದು ಜ. 23 ಮತ್ತು 24ಕ್ಕೆ ಮುಂದೂಡಲು ತೀರ್ಮಾನಿಸಿದರು.

ಪ್ರಸಕ್ತ ವರ್ಷ ಎರಡನೇ ಬಾರಿ ಜಾತ್ರೆಯನ್ನು ಮುಂದೂಡಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಕಾರಣ ಡಿಸೆಂಬರ್‌ನಲ್ಲಿ ನಿಗದಿಯಾಗಿದ್ದ ಜಾತ್ರೆಯನ್ನು ಜ. 9 ಮತ್ತು 10ಕ್ಕೆ ಮುಂದೂಡಲಾಗಿತ್ತು ಎಂದು ಗೂಳೂರು ಗಣೇಶ ಭಕ್ತಮಂಡಳಿ ಅಧ್ಯಕ್ಷರೂ ಆದ ಜಿ.ಪಂ ಸದಸ್ಯ ಶಿವಕುಮಾರ್ ಸಭೆಯಲ್ಲಿ ತಿಳಿಸಿದರು.

ಅಕಾಲಿಕ ಮಳೆಯಿಂದಾಗಿ ಗಣೇಶೋತ್ಸವದ ರಥ ಗ್ರಾಮದಿಂದ ಕೆರೆ ಅಂಗಳಕ್ಕೆ ಹೋಗಲು ಸಾಧ್ಯವಿಲ್ಲ. ಹೊಲಗಳಲ್ಲಿ ರಥ ಸಾಗುವುದಿಲ್ಲ. ಹಾಗಾಗಿ ಜಾತ್ರೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.

ಜ. 23ರ ರಾತ್ರಿ 10ಕ್ಕೆ ಗಣೇಶ ಮೂರ್ತಿಯನ್ನು ದೇವಾಲಯದಿಂದ ಹೊರಗೆ ತರಲಾಗುವುದು. ಮಧ್ಯರಾತ್ರಿ
ವರೆಗೂ ಮೆರವಣಿಗೆ ನಡೆಸಲಾಗುವುದು. 24ರ ಮಧ್ಯಾಹ್ನ 12ಕ್ಕೆ ಮತ್ತೆ ಮೆರವಣಿಗೆ ಆರಂಭವಾಗಲಿದೆ. ಸಂಜೆ ಕೆರೆಯಲ್ಲಿ ಆಕರ್ಷಕ ಮದ್ದುಗುಂಡಿನ ಪ್ರದರ್ಶನದೊಂದಿಗೆ ವಿಸರ್ಜನಾ ಮಹೋತ್ಸವ ನಡೆಯಲಿದೆ ಎಂದರು.

ಸಭೆಯಲ್ಲಿ ಗ್ರಾ.ಪಂ ಸದಸ್ಯ ಕೃಷ್ಣೇಗೌಡ, ಗೂಳೂರು ಸಿದ್ದರಾಜು, ಜಿ.ಎಲ್.ಕುಮಾರ್, ನವೀನ್, ಚಿಕ್ಕ
ರಂಗಪ್ಪ, ನಂಜುಂಡಶಾಸ್ತ್ರಿ, ಚಂದ್ರಶೇಖರ್, ಬಿ.ಕೆ.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.