
ತುಮಕೂರು: ಮಕ್ಕಳನ್ನು ಓದಿನತ್ತ ಸೆಳೆಯಬೇಕಾದರೆ ಶಾಲಾ, ಕಾಲೇಜು ಗ್ರಂಥಾಲಯಗಳಲ್ಲಿ ಪುಸ್ತಕ ಓದುವುದನ್ನು ಕಡ್ಡಾಯ ಮಾಡುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ಇಲ್ಲಿ ಗುರುವಾರ ಸಲಹೆ ಮಾಡಿದರು.
ರಾಜ್ಯ ಗ್ರಂಥಾಲಯ ಸಂಘ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ, ತುಮಕೂರು ವಿಶ್ವವಿದ್ಯಾಲಯ, ಎಲ್‍ಐಎಸ್ ಅಕಾಡೆಮಿ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಓದುಗರೇ ನಾಯಕರು’ ಎಂಬ ಗ್ರಂಥಾಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಶಾಲೆಗಳ ಗ್ರಂಥಾಲಯಗಳಲ್ಲಿ ಪುಸ್ತಕ ಓದುವುದನ್ನು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಬೇಕು. ಅದಕ್ಕಾಗಿ ಒಂದು ಪಿರಿಯಡ್ ಮೀಸಲಿಡಬೇಕು. ಓದಿದ ನಂತರ ಇತರರ ಜತೆಗೆ ಸಂವಾದ ನಡೆಸುವಂತಾಗಬೇಕು. ಇದರಿಂದ ಓದುವ ಸಂಸ್ಕೃತಿ ಬೆಳೆಯುವುದರ ಜತೆಗೆ ಜ್ಞಾನ ಭಂಡಾರ ವೃದ್ಧಿಸುತ್ತದೆ ಎಂದು ಹೇಳಿದರು.
ಓದಿನಿಂದ ಜ್ಞಾನದ ಜತೆಗೆ ಗ್ರಹಿಕೆ, ಆಲೋಚನಾ ಶಕ್ತಿ ಬೆಳೆಯುತ್ತದೆ. ಜೀವನದ ಪರಿವರ್ತನೆಗೂ ಮಾರ್ಗದರ್ಶನ ಸಿಗುತ್ತದೆ. ಗಾಂಧೀಜಿ, ಅಂಬೇಡ್ಕರ್, ಅಬ್ದುಲ್ ಕಲಾಂ ಅವರಂತಹ ಅನೇಕರು ಪುಸ್ತಕ ಪ್ರೀತಿ ಬೆಳೆಸಿಕೊಂಡಿದ್ದರು. ಓದಿನಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅನೇಕರು ಹೇಳಿಕೊಂಡಿದ್ದಾರೆ. ಓದಿಗೆ ಅಂತಹ ಪರಿವರ್ತನೆ ಮಾಡುವ ಶಕ್ತಿ ಇದೆ. ಪುಸ್ತಕಗಳು ಮನುಷ್ಯನ ಅತ್ಯುತ್ತಮ ಸ್ನೇಹಿತರು ಎಂದು ಅಭಿಪ್ರಾಯಪಟ್ಟರು.
ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಓದು ನಮ್ಮ ಜ್ಞಾನವನ್ನು ವಿಕಸನಗೊಳಿಸುತ್ತದೆ. ಓದು, ಗ್ರಹಿಕೆ, ಸಂವಾದದಿಂದ ನಮ್ಮನ್ನು ನಾವು ಅರಳಿಸಿಕೊಳ್ಳಬಹುದು. ಮನೆಗಳಲ್ಲಿ ಪುಸ್ತಕ ಓದುವ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಎಚ್.ಬಸವರಾಜೇಂದ್ರ, ‘ಗ್ರಂಥಾಲಯಗಳು ಓದುಗರನ್ನು ಸೆಳೆಯಬೇಕು. ಹೆಚ್ಚಿನ ಸೌಲಭ್ಯ ನೀಡಬೇಕು. ಓದುಗರು ಕೇಳುವ ಪುಸ್ತಕವನ್ನು ಕಾಳಜಿಯಿಂದ ಒದಗಿಸಬೇಕು’ ಎಂದು ಗ್ರಂಥಾಲಯ ಸಿಬ್ಬಂದಿಗೆ ತಿಳಿಹೇಳಿದರು.
ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಎಸ್.ಎಲ್.ಕಾಡದೇವರಮಠ, ‘ಓದುವ ಸಂಸ್ಕೃತಿ ಬೆಳೆಸುವಲ್ಲಿ ಗ್ರಂಥಾಲಯಗಳ ಪಾತ್ರದ ಬಗ್ಗೆ ತಿಳಿಸಿಕೊಡುವ ಸಲುವಾಗಿ ಸಮ್ಮೇಳನ ಏರ್ಪಡಿಸಲಾಗಿದೆ’ ಎಂದರು.
ತುಮಕೂರು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ರಾಜ್ಯ ಗ್ರಂಥಪಾಲಕರ ಸಂಘದ ಅಂತರ್ಜಾಲಕ್ಕೆ ಚಾಲನೆ ನೀಡಿದರು. ದಾವಣಗೆರೆ ವಿ.ವಿ ಕುಲಪತಿ ಬಿ.ಜಿ.ಕುಂಬಾರ, ಬೀದರ್ ವಿ.ವಿ ಕುಲಪತಿ ಬಿ.ಎಸ್.ಬಿರಾದಾರ, ಗ್ರಂಥಪಾಲಕರಾದ ಪ್ರೊ.ಎ.ವೈ.ಅಸುಂದಿ, ಪ್ರೊ.ಟಿ.ವಿ.ಕೆಂಪರಾಜು, ಪ್ರೊ.ಮುತ್ತಯ್ಯ ಕೊಗನೂರುಮಠ ಅವರನ್ನು ಸನ್ಮಾನಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್, ಎಲ್‍ಐಎಸ್ ಅಕಾಡೆಮಿ ಅಧ್ಯಕ್ಷ ಪಿ.ವಿ.ಕೊಣ್ಣೂರು, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷ ಎಂ.ಕೃಷ್ಣಪ್ಪ, ಕಾರ್ಯಾಧ್ಯಕ್ಷ ರಾಜೇಶ್ ಎನ್.ತುರಮರಿ, ಕಾರ್ಯದರ್ಶಿ ಎಚ್.ಪಿ.ಶೇಖರ್ ಉಪಸ್ಥಿತರಿದ್ದರು.
ದಿನ 4 ಪುಟ ಓದಿ ಲಕ್ಷಾಂತರ ಸಂಖ್ಯೆಯ ಪುಸ್ತಕಗಳನ್ನು ಸಂಗ್ರಹಿಸಿರುವ ಪದ್ಮಶ್ರೀ ಪುರಸ್ಕೃತರಾದ ಪುಸ್ತಕ ಮನೆ ಅಂಕೇಗೌಡ ಅವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು. ಪ್ರತಿ ದಿನವೂ ಕನಿಷ್ಠ 4 ಪುಟಗಳನ್ನಾದರೂ ಓದಬೇಕು. ಇದು ಜ್ಞಾನದ ಯುಗ. ಜ್ಞಾನದಿಂದಲೇ ಬದುಕು ರೂಪಿಸಿಕೊಳ್ಳಬೇಕಾಗಿದೆ. ಪ್ರಜ್ಞಾನವಂತರಾಗಲು ಓದಬೇಕು. ಎಲ್ಲರೂ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಅಂಕೇಗೌಡ ಸಲಹೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.