ADVERTISEMENT

ಚರ್ಮ ವಾದ್ಯಗಳ ಸರದಾರ

ಅರೆ ಬಡಿದರೆ ಮಾರಿ ಓಲಗ, ವೀರಗಾಸೆಯಲ್ಲಿ ರಂಜಿಸುವ ಕಲಾವಿದ ನರಸಿಂಹಮೂರ್ತಿ

ಎಚ್‌.ಎಸ್‌.ನರಸಿಂಹಮೂರ್ತಿ
Published 7 ಡಿಸೆಂಬರ್ 2019, 9:47 IST
Last Updated 7 ಡಿಸೆಂಬರ್ 2019, 9:47 IST
ಅರೆವಾದ್ಯದೊಂದಿಗೆ ಅಳಿಲುಘಟ್ಟದ ನರಸಿಂಹಮೂರ್ತಿ
ಅರೆವಾದ್ಯದೊಂದಿಗೆ ಅಳಿಲುಘಟ್ಟದ ನರಸಿಂಹಮೂರ್ತಿ   

ಹಾಗಲವಾಡಿ (ಗುಬ್ಬಿ): ಜಾತ್ರೆಯಾದರೆ ಚರ್ಮವಾದ್ಯ, ಅರೆವಾದ್ಯ, ವೀರಗಾಸೆ. ಮದುವೆ, ಗೃಹಪ್ರವೇಶಗಳಾದರೆ ನಾದಸ್ವರ. ಮೆರವಣಿಗೆಗಳಲ್ಲಾದರೆ ಕಹಳೆ, ಚಿಟ್ಟಿಮೇಳ, ನಾಸಿಕ್ ಡೋಲು...

ಹೀಗೆ ಎಲ್ಲ ಬಗೆಯ ಸಮಾರಂಭಗಳಿಗೂ ಒಗ್ಗುವ ಜನಪದ ಕಲೆಗಳನ್ನು ಕರಗತ ಮಾಡಿಕೊಂಡು ಕಲಾ ಸೇವೆಯಲ್ಲಿ ತೊಡಗಿಕೊಂಡವರು ನರಸಿಂಹಮೂರ್ತಿ.

ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿಯ ಅಳಿಲುಘಟ್ಟ ಗ್ರಾಮದ ನರಸಿಂಹಮೂರ್ತಿ ಅವರಿಗೆ ಪರಂಪರಾಗತವಾಗಿಯೇ ಕಲೆ ಒಲಿದು ಬಂದಿದೆ. ಬಾಲ್ಯದಲ್ಲಿಯೇ ತಾತ, ಮುತ್ತಾತರಿಂದ ಈ ಕಲೆಗಳನ್ನು ಕಲಿತುಕೊಂಡಿದ್ದಾರೆ. 6ನೇ ತರಗತಿಯಲ್ಲಿ ಓದುವಾಗಲೇ ತಂದೆ ಜೊತೆಗೆ ಅರೆವಾದ್ಯ, ಕಹಳೆ, ನಾದಸ್ವರ ಕಲಿಯಲು ಆರಂಭಿಸಿದ್ದರು.

ADVERTISEMENT

ಮೊದಮೊದಲು ತಂದೆ ಜೊತೆ ಮದುವೆ ಸಮಾರಂಭಗಳಲ್ಲಿ ಕೇವಲ ಇಪ್ಪತ್ತು, ಮೂವತ್ತು ರೂಪಾಯಿಗೆ ನಾದಸ್ವರ ನುಡಿಸಿದ್ದನ್ನು ನೆನಪಿಸಿಕೊಳ್ಳುವ ನರಸಿಂಹಮೂರ್ತಿ, ಈಗಲೂ ಅನೇಕ ಗ್ರಾಮದೇವರ ಜಾತ್ರೆಗಳಲ್ಲಿ ಎರಡರಿಂದ ಮೂರು ದಿನ ಇಬ್ಬರು ಅರೆವಾದ್ಯ ನುಡಿಸಿ ಕೇವಲ ಎರಡು ಕ್ವಿಂಟಲ್‌ ರಾಗಿಯನ್ನು ಸಂಭಾವನೆಯಾಗಿ ಪಡೆಯುತ್ತಾರೆ.

ಇಪ್ಪತ್ತು ಕಲಾವಿದರನ್ನೊಳಗೊಂಡ ಜನಪದ ಕಲಾ ಸಂಘವೊಂದನ್ನು ಕಟ್ಟಿಕೊಂಡು ಈಗಲೂ ಊರೂರು ಸುತ್ತವ ನರಸಿಂಹಮೂರ್ತಿ ಜಾತ್ರೆ, ಮದುವೆ, ದಸರಾದಂತಹ ಹತ್ತಾರು ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಮೈಸೂರು, ಬೆಂಗಳೂರು, ವಿಜಯಪುರ, ಹಿಂದೂಪುರ ಸೇರಿದಂತೆ ದೂರದೂರುಗಳಲ್ಲಿ ಕಲೆಯನ್ನು ಪ್ರದರ್ಶಿಸಿದ್ದಾರೆ.

ಕಲಾಸೇವೆಯಿಂದ ಬಂದ ಸಂಭಾವನೆಯಲ್ಲಿಯೇ ಜೀವನ ನಡೆಸುತ್ತಿರುವ ಇವರು, ಇಬ್ಬರು
ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ. ತನ್ನ ನಂತರ ಮಗ ನಾಗರಾಜ ಅವರನ್ನು ಜನಪದ ಸೇವೆಯಲ್ಲಿಯೇ ಮುಂದುವರೆಸುವುದಾಗಿ ಹೆಮ್ಮೆಯಿಂದ ನುಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.