ADVERTISEMENT

ವಾಗ್ವಾದ, ಗೊಂದಲದಲ್ಲಿ ಶಾಂತಿ ಸಭೆ ಅಂತ್ಯ

ಹುಳಿಯಾರಿನ ‘ಕನಕದಾಸರ ವೃತ್ತ’ದ ವಿಚಾರ; ಮಾಧುಸ್ವಾಮಿ ಮತ್ತು ಈಶ್ವರನಂದಪುರಿ ಸ್ವಾಮೀಜಿ ನಡುವೆ ಮಾತಿಗೆ ಮಾತು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 6:33 IST
Last Updated 17 ನವೆಂಬರ್ 2019, 6:33 IST
ಶಾಂತಿ ಸಭೆಯಲ್ಲಿ ಜೆ.ಸಿ.ಮಾಧುಸ್ವಾಮಿ, ಈಶ್ವರನಂದಪುರಿ ಸ್ವಾಮೀಜಿ, ಸಿ.ಬಿ.ಸುರೇಶ್ ಬಾಬು, ವಂಶಿಕೃಷ್ಣ ಭಾಗವಹಿಸಿದ್ದರು
ಶಾಂತಿ ಸಭೆಯಲ್ಲಿ ಜೆ.ಸಿ.ಮಾಧುಸ್ವಾಮಿ, ಈಶ್ವರನಂದಪುರಿ ಸ್ವಾಮೀಜಿ, ಸಿ.ಬಿ.ಸುರೇಶ್ ಬಾಬು, ವಂಶಿಕೃಷ್ಣ ಭಾಗವಹಿಸಿದ್ದರು   

ಚಿಕ್ಕನಾಯಕನಹಳ್ಳಿ: ಹುಳಿಯಾರಿನ ‘ಕನಕದಾಸರ ವೃತ್ತ’ದ ವಿಚಾರವಾಗಿ ಇಲ್ಲಿ ನಡೆದ ಶಾಂತಿ ಸಭೆಯು ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಯಿತು.

ಗದ್ದಲ, ಗಲಾಟೆ, ವಾಗ್ವಾದದ ಮಧ್ಯೆ ನಡೆದ ಶಾಂತಿ ಸಭೆಯಲ್ಲಿ ಕನಕ ಗುರುಪೀಠದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವರು ಏರು ಧ್ವನಿಯಲ್ಲಿ ಮಾತನಾಡಿದ ಪ್ರಸಂಗ ನಡೆಯಿತು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ಸಚಿವ ಜೆ.ಸಿ.ಮಾಧುಸ್ವಾಮಿ ವಹಿಸಿದ್ದರು.

ಹೊಸದುರ್ಗದದ ಕಾಗಿನೆಲೆ ಶಾಖಾಮಠದ ಈಶ್ವರನಂದಪುರಿ ಸ್ವಾಮೀಜಿ ಮಾತನಾಡಿ, ‘15ವರ್ಷದಿಂದ ಹುಳಿಯಾರಿನ ಆ ವೃತ್ತಕ್ಕೆ ಕನಕವೃತ್ತ ಎಂದು ಕರೆಯಲಾಗುತ್ತಿದೆ. ಈಗ ಆ ಸ್ಥಳಕ್ಕೆ ಡಾ.ಶಿವಕುಮಾರ ಸ್ವಾಮೀಜಿ ನಾಮಫಲಕ ಹಾಕಲು ಲಿಂಗಾಯತ ಸಮುದಾಯ ಮುಂದಾಗಿತ್ತು. ಆದರೆ ಕನಕವೃತ್ತ ಎಂದು ಮುಂದುವರಿಯಲಿ’ ಎಂದು ಕುರುಬ ಸಮುದಾಯ ಒತ್ತಾಯಿಸಿದ್ದಾರೆ ಎಂದರು.

ADVERTISEMENT

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ವೃತ್ತಕ್ಕೆ ಕನಕದಾಸರ ಹೆಸರಾಗಲಿ ಅಥವಾ ನಾಮ ಫಲಕವಾಗಲಿ ಇರಲಿಲ್ಲ. ಆ ಸ್ಥಳ ಖಾಲಿ ಇತ್ತು ಎಂದು ಹೇಳುತ್ತಿದಂತೆ ಗಲಾಟೆ ಪ್ರಾರಂಭವಾಯಿತು. ಈ ಹಂತದಲ್ಲಿ ಯಾರು ಯಾರಿಗೆ ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಸಮಾಧಾನ ಪಡಿಸಿದರು.

ಮಾತು ಮುಂದುವರಿಸಿದ ಸಚಿವರು, ನಾನು ಒಂದು ಮದುವೆ ಸಮಾರಂಭಕ್ಕೆ ಹೋದಾಗ ಅಲ್ಲಿ ಕೆಲವರು ವೃತ್ತಕ್ಕೆ ಶಿವಕುಮಾರ ಸ್ವಾಮೀಜಿ ಹೆಸರನ್ನು ಇಡುತ್ತೇವೆ ಎಂದು ಬಂದಿದ್ದರು. ಆದರೆ ನಾನು ಹೆಸರು ಇಡಲು ಜಿಲ್ಲಾಧಿಕಾರಿ ಹಂತದಲ್ಲಿ ತೀರ್ಮಾನ ಆಗಬೇಕು. ಅರ್ಜಿ ಕೊಡಿ ಎಂದಿದ್ದೇ. ಅದು ಬಿಟ್ಟರೆ ನಾನು ಸ್ವಾಮೀಜಿಯವರ ಹೆಸರು ಇಡಲು ಹೇಳಿಲ್ಲ ಎಂದು ಹೇಳಿದರು.

ಕಾನೂನು ಪ್ರಕಾರ ಕನಕದಾಸರ ಹೆಸರನ್ನು ಇಡಿ ನನ್ನದೇನು ಅಭ್ಯಂತರವಿಲ್ಲ. ಪಿತೂರಿನೂ ಇಲ್ಲ, ಆದರೆ ಸ್ವಾಮೀಜಿಯವರು ವೃತ್ತದಲ್ಲಿ ಮೊದಲೇ ಕನಕದಾಸರ ಹೆಸರಿತ್ತು ಎಂದು ವಾದ ಮಾಡುತ್ತಿದ್ದಾರೆ ಎಂದರು.

ಆಗ ಮಧ್ಯ ಪ್ರವೇಶಿಸಿದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು, 2006ರಲ್ಲಿ ಹುಳಿಯಾರಿನ ಗ್ರಾಮ ಪಂಚಾಯಿತಿ ಸಭೆಯಲ್ಲಿ ತೀರ್ಮಾನವಾಗಿ ಕನಕ ವೃತ್ತ ಎಂದು ನಡಾವಳಿಯಲ್ಲಿ ಬರೆಯಲಾಗಿದೆ. ಮುಂಚೆಯಿಂದಲೂ ಆ ವೃತ್ತಕ್ಕೆ ಕನಕ ವೃತ್ತವೆಂದೇ ಕರೆಯುತ್ತಿದ್ದರು ಎಂದು ಹೇಳಿದರು.

ಈಶ್ವರನಂದಪುರಿ ಸ್ವಾಮೀಜಿ ಮಾತನಾಡಿ, ಹಿಂದಿನಿಂದಲೂ ಕನಕ ವೃತ್ತ ಎಂದು ಬಂದಿದೆ ಅದನ್ನು ಬದಲಿಸೋದು ಬೇಡ ಎಂದಾಗ ಸಚಿವರಿಗೂ ಸ್ವಾಮೀಜಿಯವರಿಗೂ ವಾಗ್ವಾದ ನೆಡೆಯಿತು. ಇದರಿಂದ ಮತ್ತೆ ಸಭೆಯಲ್ಲಿ ಗದ್ದಲ ಉಂಟಾಯಿತು.

ಈ ಹಂತದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಒಂದು ಪ್ರದೇಶಕ್ಕೆ ನಾಮಕರಣ ಮಾಡಬೆಕಾದರೆ ಯಾವ ಕ್ರಮಗಳು ಕಾನೂನಿನಲ್ಲಿ ಬರುತ್ತವೆ ಎಂಬುದನ್ನು ವಿವರವಾಗಿ ಹೇಳಿದರು. ಈ ಹಂತದಲ್ಲಿ ಸ್ವಾಮೀಜಿ ಆ ವೃತ್ತಕ್ಕೆ ಕನಕದಾಸರ ಹೆಸರನ್ನು ಇಡಲೇಬೆಕು. ಇಲ್ಲವಾದರೆ ನಾವು ಹೋರಾಟ ಮಾಡುತ್ತೇವೆ ಎಂದರು.

ಸಿಟ್ಟಾದ ಸಚಿವ ಜೆ.ಸಿ.ಮಾಧುಸ್ವಾಮಿ, ನೀವು ಧಮ್ಕಿಹಾಕುತ್ತೀರ ನಾನೂ ಹೋರಾಟಗಾರನೇ. ಕಾನೂನು ಬಿಟ್ಟು ನಾನು ಹೋಗುವುದಿಲ್ಲ. ಕೂನೂನಿಗೆ ಆದ್ಯತೆ ನೀಡುವೆ. ಇದು ನನ್ನ ಹೋರಾಟ ಎಂದರು.

ಸಭೆಯಲ್ಲಿ ಗೊಂದಲ ಉಂಟಾಗಿ ಮುಖಂಡರು, ಅಧಿಕಾರಿಗಳು ಯಾವ ತೀರ್ಮಾನವನ್ನು ಕೈಗೊಳ್ಳದೆ ಹಿಂತಿರುಗಿದರು.

ಸಭೆಯಲ್ಲಿ ಎಸ್‌ಪಿ ವಂಶಿಕೃಷ್ಣ, ಉಪವಿಭಾಗಾಧಿಕಾರಿ ನಂದಿನಿ, ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್, ತಹಶೀಲ್ದಾರ್ ತೇಜಸ್ವಿನಿ, ಮುಖಂಡರಾದ ವೈ.ಸಿ.ಸಿದ್ದರಾಮಯ್ಯ, ಕೆಂಕೆರೆ ನವೀನ್, ಬರಕನಾಳ್ ವಿಶ್ವನಾಥ್, ನಂದಿಹಳ್ಳಿ ಶಿವಣ್ಣ, ರಾಮಚಂದ್ರಯ್ಯ, ಹೊಸಳ್ಳಿ ಅಶೋಕ್, ಮಿಲ್ಟ್ರಿಶಿವಣ್ಣ, ಸಿ.ಬಿ.ರೇಣುಕಸ್ವಾಮಿ, ಸಿ.ಡಿ.ಸುರೇಶ್, ಸಿ.ಎಂ.ರಂಗಸ್ವಾಮಯ್ಯ ಹಾಗೂ ಎರಡು ಸಮಾಜದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.