ADVERTISEMENT

ಬಡ್ಡಿ ಹಣಕ್ಕೆ ಕಿರುಕುಳ: ಇಬ್ಬರ ವಿರುದ್ಧ ಪ್ರಕರಣ

ಮೀಟರ್‌ ಬಡ್ಡಿಗೆ ಬೀಳದ ಕಡಿವಾಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 16:19 IST
Last Updated 19 ಡಿಸೆಂಬರ್ 2023, 16:19 IST

ತುಮಕೂರು: ಸಾಲದ ಮೇಲಿನ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ನಗರದ ನಿವಾಸಿಗಳಾದ ಶಮ್ಮು, ಇರ್ಫಾನ್‌ ಎಂಬುವರ ವಿರುದ್ಧ ತಿಲಕ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಈದ್ಗಾ ಮೊಹಲ್ಲಾ ಬಳಿಯ ನಿವಾಸಿಗಳಾದ ಜಿನತ್‌ ಉನ್ನಿಸ್ಸಾ ಮತ್ತು ಅವರ ಮಗಳು ಸಿಮ್ರಾನ್‌ ಎಂಬುವರು 7 ತಿಂಗಳ ಹಿಂದೆ ಶಮ್ಮು, ಇರ್ಫಾನ್‌ರಿಂದ ₹25 ಸಾವಿರ ಕೈ ಸಾಲ ಪಡೆದಿದ್ದಾರೆ. ಸಾಲ ಕೊಡುವಾಗ ಪ್ರತಿ ವಾರ ₹2,500 ಬಡ್ಡಿ ಕಟ್ಟುವಂತೆ ಸೂಚಿಸಿದ್ದಾರೆ. ಜಿನತ್‌ ಉನ್ನಿಸ್ಸಾಗೆ 2 ವಾರಗಳಿಂದ ಬಡ್ಡಿ ಕಟ್ಟಲು ಆಗಿಲ್ಲ. ಇದರಿಂದ ಸಾಲ ಕೊಟ್ಟವರು ಮನೆಗೆ ನುಗ್ಗಿ, ಕೊಲೆ ಬೆದರಿಕೆ ಹಾಕಿ ಬಡ್ಡಿ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಸಾಲ ಕೊಟ್ಟವರು ಮನೆಗೆ ಬಂದು ಬಡ್ಡಿ ಕಟ್ಟದಿದ್ದರೆ ಕೊಲೆ ಮಾಡುವುದಾಗಿ ಭಯಪಡಿಸಿದ್ದಾರೆ. ಮಚ್ಚಿನಿಂದ ಕೈ ಕತ್ತರಿಸುವುದಾಗಿ ಹೆದರಿಸಿದ್ದಾರೆ. ಗರ್ಭಿಣಿಯಾಗಿರುವ ನನ್ನ ಮಗಳು ಸಿಮ್ರಾನ್‌ರಿಂದ ಬಡ್ಡಿಯ ಹಣ ಪಡೆದುಕೊಂಡು ಹೋಗಿದ್ದಾರೆ’ ಎಂದು ಜಿನತ್‌ ಉನ್ನಿಸ್ಸಾ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ತಿಂಗಳು ಸಾಲ ಬಾಧೆ, ಕಿರುಕುಳದಿಂದ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ‘ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ ಹಾಕಲಾಗುವುದು’ ಎಂದು ಹೇಳಿದ್ದರು. ಆದರೂ ಮೀಟರ್ ಬಡ್ಡಿ ವಸೂಲಿ ದಂಧೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.