ADVERTISEMENT

ಭಯಕ್ಕಿಲ್ಲ ಜಾಗ; ಆತ್ಮಸ್ಥೈರ್ಯವೇ ಎಲ್ಲ

ಅಭಿಲಾಷ ಬಿ.ಸಿ.
Published 3 ಆಗಸ್ಟ್ 2020, 6:02 IST
Last Updated 3 ಆಗಸ್ಟ್ 2020, 6:02 IST
ಕಲಾವತಿ
ಕಲಾವತಿ   

ತುಮಕೂರು: ರಾಗಿ ಬಿತ್ತನೆ ಮಾಡಿದಾಗ ಕಳೆ ಬೆಳೆಯುವುದು ಸಹಜ. ಕಾಲಕಾಲಕ್ಕೆ ಕಳೆ ಕೀಳುತ್ತಿದ್ದರೆ ಮಾತ್ರ ರಾಗಿ ಹಸನಾಗಿ ಬೆಳೆಯುತ್ತಿದೆ. ಮಾನವನ ದೇಹವೂ ಹೀಗೆಯೇ. ಆಗಾಗ್ಗೆ ಕೆಲ ವೈರಸ್‌ ದಾಳಿಗೆ ತುತ್ತಾಗುತ್ತದೆ. ರೋಗ ನಿರೋಧಕ ಶಕ್ತಿ ಎಂಬ ಕಳೆ ನಾಶಕ ವೃದ್ಧಿಸಿಕೊಂಡು ಸೋಂಕು ನಿಯಂತ್ರಿಸುತ್ತಾ ಬದುಕಬೇಕು.

ಕೋವಿಡ್‌ನಿಂದ ಗುಣಮುಖರಾಗಿರುವ ಜಿಲ್ಲಾ ಆಸ್ಪತ್ರೆಯ ಸ್ಟಾಫ್‌ ನರ್ಸ್‌ ಕೆ.ಎಲ್‌.ಕಲಾವತಿ ಅವರ ಸ್ಪಷ್ಟ ನುಡಿ.

ಕೋವಿಡ್‌ ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತಷ್ಟು ಪ್ರಬಲವಾಗಿಸಿದೆ ಎಂದು ನಂಬಿರುವ ಕಲಾವತಿ ಅವರು ‘ಈ ಸೋಂಕು ಹರಡುವ ವೇಗ ಹೆಚ್ಚಿದೆ. ಆದರೆ ಅಷ್ಟೇನೂ ಅಪಾಯಕಾರಿ ವೈರಸ್‌ ಅಲ್ಲ’ ಎನ್ನುತ್ತಾರೆ.

ADVERTISEMENT

ಜಿಲ್ಲಾಸ್ಪತ್ರೆಯ ಕೋವಿಡ್‌ ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಲಾವತಿ ಅವರಿಗೆ ಕೊರೊನಾ ಸೋಂಕಿತರೊಬ್ಬರು ಮೃತಪಟ್ಟ 3 ದಿನಗಳಲ್ಲಿ ಗಂಟಲು ಕೆರೆತ, ನೆಗಡಿ ಕಾಣಿಸಿಕೊಂಡಿತ್ತು. ಜೂನ್‌ 30ರಂದು ಗಂಟಲು ದ್ರವ ಪರೀಕ್ಷೆಗೆ ಕೊಟ್ಟಿದ್ದರು. ಜುಲೈ 2ರಂದು ಸೋಂಕು ತಗುಲಿರುವುದು ದೃಢವಾಗಿತ್ತು.

‘ಕೋವಿಡ್ ದೃಢವಾದಾಗ ಒಂದು ಬಗೆಯ ಹತಾಶೆ ಕಾಡಿತ್ತು. ಪಿಪಿಇ ಕಿಟ್‌ ಧರಿಸಿ, ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ಸೋಂಕು ತಗುಲಿತಲ್ಲ ಎಂದು ಸಂಪೂರ್ಣ ಕುಗ್ಗಿಹೋಗಿದ್ದೆ. ನರ್ಸ್‌ ವೃತ್ತಿಯಲ್ಲಿರುವುದರಿಂದ ಒಂದಲ್ಲಾ ಒಂದು ಬಗೆಯ ಸೋಂಕುನೊಂದಿಗೆ ಮುಖಾಮುಖಿ ಆಗಬೇಕಿರುವುದು ಅನಿವಾರ್ಯ. ಆದರೆ ಇಷ್ಟು ಬೇಗ ನನ್ನ ದೇಹ ರೋಗ ನಿರೋಧಕ ಶಕ್ತಿ ಕಳೆದುಕೊಂಡಿತೆ ಎಂದು ಭಯವಾಗಿತ್ತು’ ಎಂದು ಸ್ಮರಿಸಿಕೊಂಡರು.

ಆಸ್ಪತ್ರೆಯಲ್ಲಿ ಸಹೋದ್ಯೋಗಿಗಳು, ವೈದ್ಯರು ಧೈರ್ಯ ತುಂಬಿದರು. ಹೆಚ್ಚುಮುತುವರ್ಜಿಯಿಂದ ಉಪಚರಿಸಿದರು. ಅದು ನನ್ನನ್ನು ಗಟ್ಟಿಯಾಗಿಸಿತು. ಸೋಂಕಿನ ಕುರಿತು ನನ್ನಲ್ಲಿದ್ದ ಎಲ್ಲ ಕಲ್ಪನೆ ದೂರವಾಯಿತು. ಹಾಗಾಗಿ 10 ದಿನದಲ್ಲೇ ಸಂಪೂರ್ಣ ಗುಣವಾದೆ ಎನ್ನುತ್ತಾರೆ.

ಈ ಹಿಂದೆಯೂ ಕೊರೊನಾಗಿಂತಲೂ ಅಪಾಯಕಾರಿ ಸೋಂಕುಗಳು ಕಾಡಿವೆ. ಸಾರ್ಸ್‌ ನಂತಹ ವೈರಸ್‌ಗಳನ್ನು ಗೆದ್ದಿದ್ದೇವೆ. ಇದು ಸಹಜವಾಗಿಯೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ತುಂಬಿದೆ ಎನ್ನುವುದು ಅವರ ಅಭಿಪ್ರಾಯ.

ಮಾಧ್ಯಮಗಳಲ್ಲಿ ಕೋವಿಡ್‌ ಕುರಿತು ಬಳಸುವ ಪದಗಳು ಜನರ ಧೈರ್ಯ ಕುಗ್ಗಿಸುತ್ತಿದೆ. ಜನರಿಗೆ ಭವಿಷ್ಯವೇ ಇಲ್ಲ ಎನ್ನುವಂತೆ ಬಿತ್ತರಿಸಲಾಗುತ್ತಿದೆ. ಇದರಿಂದ ಜನ ದಿಗಿಲುಗೊಂಡಿದ್ದಾರೆ. ಅನೇಕರಿಗೆ ಮುಂದಿನ ಜೀವನದ ಕುರಿತು ಪ್ರಶ್ನಾರ್ಥಕತೆ ಕವಿದಿದೆ. ಕೊರೊನಾ ಕುರಿತ ಜನರ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಸದಾ ಬಿಸಿನೀರು ಕುಡಿಯುವುದು, ಬೇಯಿಸಿದ, ಪೌಷ್ಟಿಕ ಆಹಾರ ಸೇವಿಸಿದರೆ ಸಂಕುಗಳಿಂದ ದೂರವಿರಬಹುದು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.