
ತುಮಕೂರು: ಹವ್ಯಕ ಬ್ರಾಹ್ಮಣ ಸಮುದಾಯದ ಕಲೆ, ಸಂಸ್ಕೃತಿ, ಧಾರ್ಮಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಜಿಲ್ಲಾ ಹವ್ಯಕ ಸಮುದಾಯದ ಅಧ್ಯಕ್ಷೆ ಮುಕ್ತಾ ಹೆಗಡೆ ಸಲಹೆ ಮಾಡಿದರು.
ನಗರದ ಶಂಕರಮಠದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಹವ್ಯಕ ಸಮುದಾಯದ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮುದಾಯದವರು ತಮ್ಮ ಸಾಮರ್ಥ್ಯ, ಪರಿಶ್ರಮ, ಪ್ರತಿಭೆಯಿಂದ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಯಕ್ಷಗಾನ, ಕಲೆ, ಸಾಹಿತ್ಯ, ತಾಳಮದ್ದಳೆ, ನೃತ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಇಂತಹ ಶ್ರೀಮಂತ ಹವ್ಯಕ ಸಮುದಾಯದ ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸಬೇಕು ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ‘ಸಾಮಾಜಿಕ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಹವ್ಯಕ ಸಮುದಾಯ ಶ್ರೀಮಂತ ಪರಂಪರೆ ಹೊಂದಿದೆ. ಇದೇ ರೀತಿ ಬ್ರಾಹ್ಮಣ ಸಮುದಾಯಕ್ಕೆ ಸಂಘಟನೆ ಅನಿವಾರ್ಯವಾಗಿದ್ದು ಎಲ್ಲ ಉಪಪಂಗಡಗಳು ಒಗ್ಗೂಡಬೇಕು’ ಎಂದು ತಿಳಿಸಿದರು.
ಕಾರ್ಯದರ್ಶಿ ಪ್ರಶಾಂತ್ ಭಟ್ ಇತರರು ಭಾಗವಹಿಸಿದ್ದರು. ತಜ್ಞ ವೈದ್ಯರಾದ ಡಾ.ಲಲಿತಾ ಅವಧಾನಿ ಅವರನ್ನು ಸನ್ಮಾನಿಸಲಾಯಿತು. ಹವ್ಯಕ ಸಮುದಾಯ 25 ವರ್ಷ ಪೂರೈಸಿದ ನೆನಪಿಗೆ ‘ರಜತ ರಥ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.