ADVERTISEMENT

ತುಮಕೂರು | ‘ಹೆಲಿ ಟೂರಿಸಂ’ ಆರಂಭ; ಹೆಲಿಕಾಪ್ಟರ್‌ನಲ್ಲಿ ನಗರ ಸುತ್ತುವ ಅವಕಾಶ

ಡ್ರೋನ್ ಶೋಗೂ ಅವಕಾಶ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 6:09 IST
Last Updated 2 ಸೆಪ್ಟೆಂಬರ್ 2025, 6:09 IST
ಹೆಲಿಕಾಪ್ಟರ್‌ (ಸಾಂದರ್ಭಿಕ ಚಿತ್ರ)
ಹೆಲಿಕಾಪ್ಟರ್‌ (ಸಾಂದರ್ಭಿಕ ಚಿತ್ರ)   

ತುಮಕೂರು: ದಸರಾ ಆಚರಣೆಗೆ ಸಿದ್ಧತೆಗಳು ಬಿರುಸು ಪಡೆದುಕೊಂಡಿದ್ದು, ಈ ಬಾರಿಯೂ ‘ಹೆಲಿ ಟೂರಿಸಂ’ಗೆ ಅವಕಾಶ ಕಲ್ಪಿಸಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಕುಳಿತು ನಗರ ಪ್ರದಕ್ಷಿಣೆ ಹಾಕುವ ಅವಕಾಶ ಲಭ್ಯವಾಗಲಿದೆ.

ಹಿಂದಿನ ವರ್ಷದಿಂದ ಜಿಲ್ಲಾ ಆಡಳಿತದಿಂದ ದಸರಾ ಆಚರಣೆ ಮಾಡಲಾಗುತ್ತಿದ್ದು, ಹೆಲಿಕಾಪ್ಟರ್‌ನಲ್ಲಿ ಸಂಚರಿಸುವ ಅವಕಾಶ ಕಲ್ಪಿಸಲಾಗಿತ್ತು. ದುಬಾರಿ ಎಂಬ ಕಾರಣಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿರಲಿಲ್ಲ. ಈ ಬಾರಿಯೂ ಹೆಲಿಕಾಪ್ಟರ್‌ನಲ್ಲಿ ನಗರ ಸುತ್ತಾಟ ನಡೆಸುವ ಅವಕಾಶ ಕಲ್ಪಿಸಲಾಗಿದ್ದು, ಒಬ್ಬರಿಗೆ ₹4 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. 10ರಿಂದ 12 ನಿಮಿಷ ಸಂಚರಿಸಬಹುದು.

ದಸರಾ ಆಚರಣೆಯ ಪೂರ್ವಭಾವಿ ಸಭೆಯ ನಂತರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಿದ್ಧತೆಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡರು.

ADVERTISEMENT

ಹೆಲಿಕಾಪ್ಟರ್‌ನಲ್ಲಿ ಸುತ್ತಾಟ ನಡೆಸಲು ಬಯಸುವವರು ನೋಂದಣಿ ಮಾಡಿಕೊಳ್ಳಬೇಕು. ಜನರಿಂದ ಬರುವ ಸ್ಪಂದನೆ ನೋಡಿಕೊಂಡು ಎಷ್ಟು ದಿನಗಳ ಕಾಲ ಹೆಲಿಕಾಪ್ಟರ್ ಹಾರಾಟ ನಡೆಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ. ಸೆ. 8ರಿಂದ ನೋಂದಣಿ ಆರಂಭವಾಗಲಿದೆ. ಜತೆಗೆ ಡ್ರೋನ್ ಶೋ ಸಹ ಇರಲಿದ್ದು, ಅದರಲ್ಲಿ ವಿವಿಧ ಬಗೆಯ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

ಪಂಜಿನ ಕವಾಯತು: ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಾದರಿಯಲ್ಲಿ ಪಂಜಿನ ಕವಾಯತು ನಡೆಯಲಿದೆ. ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಪೊಲೀಸ್ ಸೇರಿದಂತೆ 256 ಮಂದಿ ಇದರಲ್ಲಿ ಭಾಗವಹಿಸಲಿದ್ದು, ಈಗಾಗಲೇ ತಾಲೀಮು ನಡೆಯುತ್ತಿದೆ. ಸೆ. 22ರಂದು ನಡೆಯುವ ದಸರಾ ಉದ್ಘಾಟನೆ ಹಾಗೂ ಕೊನೆಯ ದಿನ ಬಾಣಬಿರುಸು ಮೆರುಗು ನೀಡಲಿದೆ. ದಸರಾ ಸಮಯದಲ್ಲಿ ನಗರದಲ್ಲಿ ದೀಪಾಲಂಕಾರ ಮಾಡಲಾಗುವುದು ಎಂದು ವಿವರಿಸಿದರು.

ಕಳೆದ ಬಾರಿ ದಸರಾ ಮೆರವಣಿಗೆಯಲ್ಲಿ 2 ಆನೆಗಳು ಭಾಗವಹಿಸಿದ್ದು, ಈ ಬಾರಿ ಇನ್ನೂ 3 ಸೇರಿದಂತೆ 5 ಆನೆಗಳು ಭಾಗವಹಿಸಲಿವೆ. ದಸರಾ ಮೆರವಣಿಗೆಗೂ ಮುನ್ನ ನಗರದಲ್ಲಿ ಆನೆಗಳ ತಾಲೀಮು ನಡೆಯಲಿದೆ. ಹೆಚ್ಚುವರಿಯಾಗಿ ಆನೆಗಳನ್ನು ಒದಗಿಸುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಎಸ್ಪಿ ಕೆ.ವಿ.ಅಶೋಕ್ ಉಪಸ್ಥಿತರಿದ್ದರು.

ಎಲ್ಲ ಗ್ರಾ.ಪಂ.ಗಳಲ್ಲಿ ಪ್ರಚಾರ:

ದಸರಾ ಬಗ್ಗೆ ಜಿಲ್ಲೆಯ ಎಲ್ಲ 330 ಗ್ರಾಮ ಪಂಚಾಯಿತಿಗಳಲ್ಲೂ ಪ್ರಚಾರ ಕಾರ್ಯ ನಡೆಸಲಾಗುವುದು ಎಂದು ಜಿ.ಪರಮೇಶ್ವರ ತಿಳಿಸಿದರು. ಜಿಲ್ಲೆಯ ಗ್ರಾಮೀಣ ಭಾಗದ ಜನರು ಭಾಗವಹಿಸಬೇಕು ಎಂಬ ಕಾರಣಕ್ಕೆ ಹಳ್ಳಿ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ದಸರಾ ಸಮಯದಲ್ಲಿ ಗ್ರಾಮೀಣ ಭಾಗಕ್ಕೆ ಹೆಚ್ಚುವರಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.