ADVERTISEMENT

ಹೇಮಾವತಿಯಿಂದ ಎಲ್ಲ ಕೆರೆ ತುಂಬಿಸಿ

ಸಂಸದ ಜಿ.ಎಸ್.ಬಸವರಾಜು ನೇತೃತ್ವದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಭೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 14:33 IST
Last Updated 21 ಸೆಪ್ಟೆಂಬರ್ 2019, 14:33 IST
ದಿಶಾ ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿದರು.
ದಿಶಾ ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿದರು.   

ತುಮಕೂರು: ಕಳೆದ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜಿಲ್ಲೆಯ ಜನರು ತತ್ತರಿಸಿದ್ದರು. ಈ ಬಾರಿ ಹೇಮಾವತಿ ನಾಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕು ಎಂದು ಹೇಮಾವತಿ ನಾಲಾ ವಲಯದ ಎಂಜಿನಿಯರ್ ಮೋಹನ್ ಅವರಿಗೆ ಸಂಸದ ಜಿ.ಎಸ್.ಬಸವರಾಜು ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ನಡೆದ ದಿಶಾ (ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ) ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಗೊರೂರು ಜಲಾಶಯದಲ್ಲಿ 36 ಟಿಎಂಸಿ ಅಡಿ ನೀರಿದೆ. ಆ ಪ್ರದೇಶದಲ್ಲಿ ಸಾಕಷ್ಟು ಮಳೆ ಆಗುತ್ತಿದೆ ಎಂದು ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ADVERTISEMENT

‘ಹೇಮಾವತಿ ನಾಲೆ ನೀರಿನಿಂದ ನಾಲೆಯ ಕೊನೆಯ ಭಾಗದ ಕೆರೆಗಳನ್ನೂ ಭರ್ತಿ ಮಾಡಬೇಕು. ನಾಲೆಗೆ ನೀರಿನ ಮಾಪಕ ಅಳವಡಿಸಿ ಪ್ರತಿ ದಿನ ಹರಿಯುವ ನೀರಿನ ಪ್ರಮಾಣದ ಅಂಕಿ ಅಂಶ ದಾಖಲಿಸಬೇಕು. ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇರುವುದರಿಂದ ಡಿಸೆಂಬರ್‌ವರೆಗೂ ನೀರು ಹರಿಯುವ ನಿರೀಕ್ಷೆ ಇದೆ’ ಎಂದರು.

‘ನೀರಿನ ವಿಚಾರವಾಗಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಕೇಂದ್ರ ಸರ್ಕಾರದಿಂದ ನೀಡಿರುವ ಇಲಾಖಾವಾರು ಅನುದಾನದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ. 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್‌ ಅವರಿಗೆ ಸಂಸದರು ಸೂಚಿಸಿದರು.

ದಿಶಾ ಸಮಿತಿಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳ ಯಶಸ್ಸಿಗೆ ಅಧಿಕಾರಿಗಳು, ಪರಿಣತರು, ನಿವೃತ್ತ ಅಧಿಕಾರಿಗಳು, ರೈತರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಮಾಧ್ಯಮ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡ ‘ವಿಷನ್ ಮತ್ತು ಪ್ರಷರ್ ಗ್ರೂಪ್’ ರಚಿಸಲು ಸಭೆ ಕರೆದು ಚರ್ಚಿಸಬೇಕು. ಹೋಬಳಿ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಹೋಬಳಿಮಟ್ಟದ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದ ದಿಶಾ ಉಪ ಸಮಿತಿಗಳನ್ನು ರಚಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮಾತನಾಡಿ, ಸ್ಮಾರ್ಟ್‌ಸಿಟಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ₹ 112.46 ಕೋಟಿಯನ್ನು ವಿವಿಧ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ ಎಂದು ಸಭೆಗೆ ವಿವರವಾದ ಮಾಹಿತಿ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಇಫ್ತಿಕಾರ್ ಅಹಮದ್, ‘ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಜಿಲ್ಲೆಗೆ ₹ 6.8 ಕೋಟಿ ಬಿಡುಗಡೆಯಾಗಿದೆ. ಈವರೆಗೂ 156 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 1470 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಹೊಸದಾಗಿ 115 ಘಟಕಗಳನ್ನು ನಿರ್ಮಿಸುವ ಯೋಜನೆ ತಯಾರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ‘ಗ್ರಾಮೀಣ ಜನರು ಕುಡಿಯುವ ನೀರಿನ ತೊಂದರೆ ಅನುಭವಿಸುವುದು ಈವರೆಗೂ ಕೊನೆಗೊಂಡಿಲ್ಲ. ಆರ್.ಓ. ಘಟಕ ಸ್ಥಾಪಿಸಿ 3 ತಿಂಗಳೊಳಗೆ ಕೆಟ್ಟುಹೋಗುತ್ತಿದೆ. ಘಟಕ ಸ್ಥಾಪಿಸುವ ಏಜೆನ್ಸಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ‘2017ರಲ್ಲಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 9,569 ರೈತರಿಗೆ ವಿಮೆ ಹಣ ಬಂದಿಲ್ಲ. ನಂತರ ಪರಿಶೀಲಿಸಿದಾಗ ಈ ಅರ್ಜಿಗಳಲ್ಲಿ 7957 ಅರ್ಜಿ ವಿಮಾ ಪರಿಹಾರ ಪಡೆಯಲು ಅರ್ಹಗೊಂಡಿವೆ. ಆದರೆ ರೈತರಿಗೆ ವಿತರಿಸಬೇಕಾದ ₹ 6.81 ಕೋಟಿವಿಮಾ ಮೊತ್ತದ ಹಣವನ್ನು ಸಂಬಂಧಿಸಿದ ಬ್ಯಾಂಕುಗಳೇ ಪಾವತಿ ಮಾಡಬೇಕೆಂದು ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಆಗ ಮಧ್ಯಪ್ರವೇಶಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿ ಗಣೇಶ್, ವಿಮಾ ಕಂಪನಿಗಳು ಸೂಕ್ತ ಸಮಯಕ್ಕೆ ಅರ್ಜಿಗಳನ್ನು ಬ್ಯಾಂಕುಗಳಿಗೆ ಸಲ್ಲಿಸಿಲ್ಲ. ಒಂದು ವರ್ಷ ತಡ ಮಾಡಿವೆ ಎಂದರು.

ಆಗ ಜಿಲ್ಲಾಧಿಕಾರಿ ಈ ಬಗ್ಗೆ ವಿಮಾ ಕಂಪನಿಯ ಪ್ರತಿನಿಧಿಗಳನ್ನು ಒಳಗೊಂಡ ಸಭೆ ನಡೆಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು. ವಿಮೆ ಹಣ ಬಾರದ ರೈತರು ಕಟ್ಟಿರುವ ವಿಮಾ ಕಂತನ್ನು ವಾಪಸ್ ನೀಡಬೇಕು ಎಂದು ಸೂಚಿಸಿದರು.

ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಮಾತನಾಡಿ, ಪಾವಗಡ ಹಾಗೂ ಶಿರಾ ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ನಿವೇಶನಗಳು, ನಿವೇಶನ ಸಹಿತ ಹಾಗೂ ರಹಿತ ಕುಟುಂಬಗಳು, ಸ್ಮಶಾನ ಭೂಮಿಗಳ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಸಂತ ನರಸಾಪುರ ಹಾಗೂ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 22.5 ಪ್ರದೇಶವನ್ನು ಮೀಸಲಿಡಬೇಕು. ಈ ಬಗ್ಗೆ ಪತ್ರಿಕಾ ಜಾಹೀರಾತು ನೀಡಿ ಸಮುದಾಯದವರಿಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.

ಪಾವಗಡ ತಾಲ್ಲೂಕು ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಈ ಹಟ್ಟಿಗೆ ಸೂಕ್ತ ರಸ್ತೆ ಸಂಪರ್ಕ ಇಲ್ಲ, ಚರಂಡಿ ವ್ಯವಸ್ಥೆ, ಶಾಲಾ ಅಭಿವೃದ್ಧಿ ಕಂಡಿಲ್ಲ. ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಪ್ರಗತಿ, ನಕಲಿ ಪಡಿತರ ಚೀಟಿಗಳ ವಿತರಣೆ, ಆಯುಷ್ಮಾನ್ ಆರೋಗ್ಯ ಭಾರತ್ ಯೋಜನೆ ಬಗ್ಗೆ ಆಯಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಯೋಜನಾ ನಿರ್ದೇಶಕ ಮಾಂಕಾಳಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ದಿಶಾ ಸಮಿತಿಗೆ ನೇಮಕ

ದಿಶಾ ಸಮಿತಿಯಲ್ಲಿ ಜಿಲ್ಲೆ ಎಲ್ಲ ಶಾಸಕರು, ಪಾಲಿಕೆ ಮೇಯರ್, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಐದು ಗ್ರಾಮಪಂಚಾಯಿ ಅಧ್ಯಕ್ಷರು, ಎಲ್ಲ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಸಿಐಟಿಯ ನಿರ್ದೇಶಕ ಡಾ.ಡಿ.ಎಸ್.ಸುರೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಅಂಚೆ ಅಧೀಕ್ಷಕರು ಸಮಿತಿ ಸದಸ್ಯರಾಗಿರುತ್ತಾರೆ ಎಂದು ಶುಭಾ ಕಲ್ಯಾಣ್ ಸಭೆಯ ಗಮನಕ್ಕೆ ತಂದರು.

ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಾದ ಟಿ.ಆರ್.ರಘೋತ್ತಮ ರಾವ್, ಎನ್.ಎಸ್. ಜಯಕುಮಾರ್, ನಾಗೇಂದ್ರ ಪ್ರಸಾದ್, ಪ್ರೇಮಹೆಗಡೆ, ಕುಂದರನಹಳ್ಳಿ ರಮೇಶ್ ಅವರನ್ನು ಸಮಿತಿ ಸದಸ್ಯರನ್ನಾಗಿ ಸಂಸದರು ನಾಮನಿರ್ದೇಶನ ಮಾಡಿದರು. ಉಳಿದಂತೆ ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಪಂಚಾಯಿತಿ ಸಿಇಓ ಶುಭಾಕಲ್ಯಾಣ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸದರು ತಿಳಿಸಿದರು.

ಹೆದ್ದಾರಿ ಸಮಸ್ಯೆ; ಮತ್ತೆ ಸಭೆ

ತುಮಕೂರು ಮತ್ತು ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣೆಗೆ ಸಂಬಂಧಿಸಿದಂತೆ ತಿಪಟೂರು ತಾಲ್ಲೂಕು ಬೈರಗೊಂಡನಹಳ್ಳಿ ಮತ್ತು ಹುಚ್ಚಗೊಂಡನಹಳ್ಳಿ ಬಳಿ ಎದುರಾಗಿರುವ ಸಮಸ್ಯೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಭೆಯ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿ ಅವರು ಈ ಬಗ್ಗೆ ಸಂಸದರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಮತ್ತೆ ಸಭೆ ಕರೆದು ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.