ತುಮಕೂರು: ಹೇಮಾವತಿ ನೀರಿಗೆ ಪ್ರತಿ ವರ್ಷವೂ ಜಿಲ್ಲೆಯ ಜನರು ಬೇಡ ಬೇಕೆ? ನೀರು ಕೊಡಿ, ನೀರು ಬಿಡಿ ಎಂದು ಗೋಗರೆಯಬೇಕೆ? ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಗೊರೂರು ಅಣೆಕಟ್ಟೆಯ ನೀರು ಸಂಗ್ರಹ ಗರಿಷ್ಠ ಸಾಮರ್ಥ್ಯ 2,922 ಅಡಿಗಳು. ಪ್ರಸ್ತುತ 2,902 ಅಡಿಗಳಷ್ಟು ನೀರು ಸಂಗ್ರಹವಿದೆ. 37.103 ಟಿಎಂಸಿ ಸಂಗ್ರಹ ಸಾಮರ್ಥದ ಅಣೆಕಟ್ಟೆಯಲ್ಲಿ ಸುಮಾರು 20 ಟಿಎಂಟಿ ಅಡಿಗಳಿಗೂ ಹೆಚ್ಚು ನೀರು ಇದೆ. ಒಳ ಹರಿವು 10 ಸಾವಿರ ಕ್ಯುಸೆಕ್ ದಾಟಿದೆ. ಸಾಮಾನ್ಯವಾಗಿ 12 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾದ ಸಮಯದಲ್ಲಿ ನಾಲೆಗಳಿಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಬಹುದಾಗದೆ. ಆದರೂ ಏಕೆ ಮೀನಮೇಷ ಎಣಿಸಲಾಗುತ್ತಿದೆ ಎಂಬುದು ರೈತರ ಪ್ರಶ್ನೆ.
ಜಿಲ್ಲೆಗೆ ನಿಗದಿಪಡಿಸಿರುವ 24.08 ಟಿಎಂಸಿ ಅಡಿಗಳಷ್ಟು ನೀರನ್ನು ಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಗೊರೂರು ಜಲಾಶಯ ಭರ್ತಿಯಾದ ನಂತರ ವ್ಯರ್ಥವಾಗಿ ನದಿಗೆ ನೀರು ಹರಿದು ಹೋಗುತ್ತದೆ. ಆದರೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ, ನಿರ್ವಹಣೆ ಮಾಡುವ ವ್ಯವಸ್ಥೆಯೇ ಇಲ್ಲವಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಜಲಾಶಯ ಭರ್ತಿಯಾದ ಸಮಯದಲ್ಲಿ ನಾಲೆಗಳಿಗೆ ನೀರು ಹರಿಸಲು ಆರಂಭಿಸಿದರೆ ಜಿಲ್ಲೆಗೆ ಹಂಚಿಕೆ ಮಾಡಿದಷ್ಟು ಹರಿಸಲು ಸಾಧ್ಯವಾಗುವುದಿಲ್ಲ. ಸಾಕಷ್ಟು ನೀರು ನದಿಯ ಮೂಲಕ ಹರಿದು ಹೋಗುತ್ತದೆ. ಅಂತಹ ಸಮಯದಲ್ಲಿ ಜಿಲ್ಲೆಯ ಪಾಲಿನ ನೀರನ್ನು ಪಡೆದುಕೊಳ್ಳುವುದು ಕಷ್ಟಕರ. ಪ್ರಸ್ತುತ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಪ್ರಮಾಣವೂ ಏರುತ್ತಲೇ ಇದೆ. ಇದೇ ಸಮಯದಲ್ಲಿ ನೀರು ಹರಿಸಲು ಆರಂಭಿಸಿದರೆ ಜಿಲ್ಲೆಯ ರೈತರು ಹಾಗೂ ಕುಡಿಯುವ ನೀರಿಗೆ ಕೆರೆಗಳನ್ನು ತುಂಬಿಸಲು ಸಹಕಾರಿಯಾಗುತ್ತದೆ. ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ.
ಕಳೆದ ವರ್ಷ ಆಗಸ್ಟ್ 9ರಿಂದ ತುಮಕೂರು ಭಾಗದ ನಾಲೆಗೆ ನೀರು ಹರಿಸಲಾಗಿತ್ತು. ಕೊನೆಗೆ ಮಳೆ ಕೈಕೊಟ್ಟು ಜಲಾಶಯ ಭರ್ತಿಯಾಗದೆ, ಕೆಲವು ದಿನಗಳು ಮಾತ್ರ ನೀರು ಹರಿಸಿ ನಿಲ್ಲಿಸಲಾಗಿತ್ತು. ನಂತರ ನೀರು ಹರಿಸಲೇ ಇಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿತ್ತು. ಯಾವ ಕೆರೆಗೂ ಸರಿಯಾಗಿ ನೀರು ತುಂಬಿಸಲು ಸಾಧ್ಯವಾಗಲಿಲ್ಲ. ನಗರಕ್ಕೆ ನೀರು ಪೂರೈಸುವ ಬುಗುಡನಹಳ್ಳಿ ಕೆರೆ ಜನವರಿ ವೇಳೆಗೆ ಖಾಲಿಯಾಗಿತ್ತು. ಮಾರ್ಚ್‌ನಲ್ಲಿ ಅಣೆಕಟ್ಟೆಯಿಂದ ಮಧ್ಯಂತರವಾಗಿ ಕುಡಿಯುವ ನೀರಿಗಾಗಿ ನೀರು ಹರಿಸಿ ಬುಗುಡನಹಳ್ಳಿ ಕೆರೆ ತುಂಬಿಸಲಾಯಿತು. ಆಗ ತುಂಬಿಸಿದ ನೀರು ಈವರೆಗೂ ನಗರದಲ್ಲಿ ಸಮಸ್ಯೆಯಾಗದಂತೆ ಮಾಡಿದೆ. ಈಗ ಕೆರೆಯಲ್ಲಿ ನೀರು ಖಾಲಿಯಾಗುತ್ತಾ ಬಂದಿದ್ದು, ಸಮಸ್ಯೆ ತಲೆದೋರುವ ಮುನ್ನ ನೀರು ಹರಿಸಬೇಕಾಗಿದೆ.
ಅಣೆಕಟ್ಟೆ ಭರ್ತಿ ಆಗುವವರೆಗೂ ಕಾಯ್ದು, ಆಗಸ್ಟ್‌ನಲ್ಲಿ ನೀರು ಬಿಡಲು ಆರಂಭಿಸಿದರೆ ಹೆಚ್ಚು ದಿನಗಳ ಕಾಲ ನಾಲೆಗೆ ಹರಿಸಲು ಸಾಧ್ಯವಾಗುವುದಿಲ್ಲ. ಸೆಪ್ಟೆಂಬರ್‌ಗೆ ಮುಂಗಾರು ಮಾರುತ ಅಂತ್ಯವಾಗಲಿದ್ದು, ಒಳ ಹರಿವು ಕಡಿಮೆಯಾದಂತೆ ನಾಲೆಗೆ ನೀರು ಹರಿಸುವ ಪ್ರಮಾಣವನ್ನು ತಗ್ಗಿಸಲಾಗುತ್ತದೆ. ಜುಲೈ ಮಧ್ಯ ಭಾಗದಲ್ಲೇ ನೀರು ಬಿಟ್ಟರೆ ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಿ, ಜಿಲ್ಲೆಯ ರೈತರಿಗೆ ಉಪಯೋಗವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಭರ್ತಿ ಮಾಡಬಹುದು ಎಂದು ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಮುಖಂಡ ಸೊಗಡು ಶಿವಣ್ಣ ಒತ್ತಾಯಿಸಿದರು.
ಕೆಎಆರ್‌ನಿಂದ ಕೃಷಿಗೆ ನೀರು
ಕೆಆರ್‌ಎಸ್‌ನಿಂದ ಕೃಷಿಗೆ ನೀರು ಹರಿಸಲು ಆರಂಭಿಸಲಾಗಿದೆ. ಆದರೆ ಹೇಮಾವತಿಯಿಂದ ಏಕೆ ನೀರು ಬಿಡಲು ವಿಳಂಬ ಮಾಡಲಾಗುತ್ತಿದೆ. ಎಲ್ಲರೂ ರೈತರೇ ಅಲ್ಲವೆ. ಒಂದೊಂದು ಜಿಲ್ಲೆಗೆ ಒಂದೊಂದು ನ್ಯಾಯವೇ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಅಣೆಕಟ್ಟೆ ಭರ್ತಿಯಾಗುವವರೆಗೂ ಕಾಯದೆ ಒಂದೆರಡು ದಿನಗಳಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಜಿಲ್ಲೆಯ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ನಾಗೇಂದ್ರಪ್ಪ ಒತ್ತಾಯಿಸಿದರು. ಕಳೆದ ವರ್ಷ ಬರದಿಂದ ಜಿಲ್ಲೆಯ ಜನರು ತತ್ತರಿಸಿದ್ದು ಕುಡಿಯುವ ನೀರಿಗೂ ಪರದಾಟ ತೀವ್ರವಾಗಿತ್ತು. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು ಅಣೆಕಟ್ಟೆಗೂ ನೀರು ಬರುತ್ತಿರುವುದರಿಂದ ನಾಲೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.