ADVERTISEMENT

‘ಕಮಿಷನ್‌’ ಕೊಟ್ಟರೆ ಪರಿಹಾರ ಮೊತ್ತ ಕೊಡ್ತಿರಾ?

ಪರಿಹಾರಕ್ಕಾಗಿ ಭೂಸ್ವಾಧೀನ ಅಧಿಕಾರಿ ಕಚೇರಿಗೆ ಬೀಗಹಾಕಿ ರೈತಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 9:10 IST
Last Updated 1 ಅಕ್ಟೋಬರ್ 2019, 9:10 IST
ರೈತಸಂಘ ಮತ್ತು ಹಸಿರುಸೇನೆಯ ಪ್ರತಿನಿಧಿಗಳೊಂದಿಗೆ ಸರ್ಕಾರಿ ಕಚೇರಿಗೆ ಬೀಗ ಹಾಕಿ ರೈತರು ಪ್ರತಿಭಟನೆ ಮಾಡಿದರು
ರೈತಸಂಘ ಮತ್ತು ಹಸಿರುಸೇನೆಯ ಪ್ರತಿನಿಧಿಗಳೊಂದಿಗೆ ಸರ್ಕಾರಿ ಕಚೇರಿಗೆ ಬೀಗ ಹಾಕಿ ರೈತರು ಪ್ರತಿಭಟನೆ ಮಾಡಿದರು   

ತುಮಕೂರು: ಹೇಮಾವತಿ ನಾಲೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಹೇಮಾವತಿ ನಾಲಾ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಗೆ ಬೀಗ ಹಾಕಿ ರೈತರು ಸೋಮವಾರ ಪ್ರತಿಭಟನೆ ಮಾಡಿದರು.

ರೈತರು ಕಚೇರಿಯ ಬಾಗಿಲಲ್ಲೇ ಕುಳಿತು, ಪರಿಹಾರ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.

ನಾಲೆ ನಿರ್ಮಾಣ ಯೋಜನೆ ಪ್ರಾರಂಭವಾಗಿ 7 ವರ್ಷಗಳು ಆಗಿವೆ. ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿದ್ದಾರೆ. ಅವರಿಗೆ ಸಕಾಲಕ್ಕೆ ಅನುದಾನ ಬಿಡುಗಡೆ ಆಗುತ್ತಿದೆ. ಆದರೆ, ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

ಸಮರ್ಪಕ ಪರಿಹಾರಕ್ಕಾಗಿ ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದೇವೆ. ಪ್ರತಿಭಟನೆಗಳನ್ನು ಮಾಡಿದ್ದೇವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಭರವಸೆಗಳನ್ನು ನೀಡುತ್ತಿದ್ದಾರೆ. ಪರಿಹಾರ ನೀಡುತ್ತಿಲ್ಲ. ಕಳೆದ ತಿಂಗಳು ನಾಲೆಯನ್ನು ಮುಚ್ಚಿ, ಅದರಲ್ಲಿ ನಾಟಿ ಮಾಡಿ ಪ್ರತಿಭಟಿಸಿದ್ದೆವು. 15 ದಿನಗಳ ಒಳಗಾಗಿ ನಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಈಗ ಒಂದು ತಿಂಗಳು ಕಳೆದಿದೆ. ನಮ್ಮ ಗೋಳು ಕೇಳುವವರು ಇಲ್ಲ ಎಂದು ಪ್ರತಿಭಟನಾ ನಿರತರು ಆಕ್ರೋಶ ಹೊರಹಾಕಿದರು.

ವಶಪಡಿಸಿಕೊಂಡಿರುವ ಜಮೀನಲ್ಲಿನ ಮರಗಳು, ಮನೆ ಮತ್ತು ಕೊಳವೆಬಾವಿಗಳ ಲೆಕ್ಕವನ್ನು ಅಧಿಕಾರಿಗಳು ಸರಿಯಾಗಿ ಮಾಡಿಲ್ಲ. ಇದರಿಂದ ಅವೈಜ್ಞಾನಿಕವಾದ ಪರಿಹಾರ ಮೊತ್ತ ನಿಗದಿಯಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

10 ಗುಂಟೆ ಜಾಗ ಸ್ವಾಧೀನ ಮಾಡಿಕೊಂಡರೂ ಕೇವಲ 2 ಗುಂಟೆಯಂದು ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ. ಅಡಿಕೆ, ತೆಂಗಿನ ಮರಗಳ ಲೆಕ್ಕ ಸೇರಿಸಿಲ್ಲ. ಅಂದಾಜು ₹ 2 ಲಕ್ಷ ಖರ್ಚುಮಾಡಿ ಕೊರೆಸಿದ ಕೊಳವೆಬಾವಿಯೂ ನಾಲೆಯ ಕೆಳಗೆ ಹೂತು ಹೋಯಿತು. ಇದಕ್ಕೆಲ್ಲ ಸೂಕ್ತ ಪರಿಹಾರ ನೀಡಲೇಬೇಕು ಎಂದು ರೈತಮಹಿಳೆ ತಿಬ್ಬಮ್ಮ ಒತ್ತಾಯ ಮಾಡಿದರು.

ಸ್ಥಳಕ್ಕೆ ಬಂದ ಡಿವೈಎಸ್ಪಿ ತಿಪ್ಪೆಸ್ವಾಮಿ ಅವರು ಪ್ರತಿಭಟನಾ ನಿರತ ರೈತರ ಮನವೊಲಿಸಿ, ಹಾಕಿದ್ದ ಬೀಗ ತೆಗೆಸಿ, ಕಚೇರಿ ಕಾರ್ಯಗಳಿಗೆ ಅನುವು ಮಾಡಿಕೊಟ್ಟರು.

ಉಪವಿಭಾಗಾಧಿಕಾರಿ ಮೋಹನ್ ಕುಮಾರ್ ಅವರು ಸ್ಥಳಕ್ಕೆ ಭೇಟಿನೀಡಿ, 15 ದಿನಗಳ ಒಳಗೆ ಜಿಲ್ಲಾಧಿಕಾರಿ, ಭೂಸ್ವಾಧೀನಾಧಿಕಾರಿಯೊಂದಿಗೆ ರೈತರ ಸಭೆ ಏರ್ಪಡಿಸುತ್ತೇವೆ. ಅಲ್ಲಿಗೆ ಬಂದು ನಿಮ್ಮ ಅಹವಾಲುಗಳನ್ನು ಸಲ್ಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದರು.

ರೈತಸಂಘದ ಕುಣಿಗಲ್‌ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲ್‌ ಕುಮಾರ್‌, ಕಾರ್ಯದರ್ಶಿ ವೆಂಕಟೇಶ್‌,ರೈತರಾದ ಮತ್ತಿಕಟ್ಟೆ ರಾಮಣ್ಣ, ಮಾಸ್ತಿಗೌಡ, ನರಸಿಂಹ, ರಾಮಣ್ಣ, ರಾಜು ವೆಂಕಟೇಶ್ ಇದ್ದರು.

*

‘ಜಮೀನು ಕಳೆದುಕೊಂಡವರ ವಲಸೆ’
ಇದ್ದ ಅರ್ಧ ಎಕರೆ ಜಮೀನನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ನನಗೀಗ ಜೀವನೋಪಾಯಕ್ಕೆ ದಾರಿ ಇಲ್ಲ. ಬೆಂಗಳೂರಿಗೆ ವಲಸೆ ಹೋಗಿ ಎಳೆನೀರಿನ ವ್ಯಾಪಾರ ಮಾಡುತ್ತಿದ್ದೇನೆ ಎಂದು ಪ್ರತಿಭಟನೆಯಲ್ಲಿದ್ದ ಕಾಡುಮತ್ತಿಕೆರೆಯ ಮಾಸ್ತಿಗೌಡರು ತಿಳಿಸಿದರು.

ನನ್ನದು ಅದೇ ಸ್ಥಿತಿ ಸ್ವಾಮಿ. ಜಮೀನು ಹೋದಮೇಲೆ ನಾನೀಗ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ರೈತರಾಗಿದ್ದ ಗೋವಿಂದಪ್ಪ ಹೇಳಿದರು.

ಕುಣಿಗಲ್‌ ತಾಲ್ಲೂಕಿನ ಸಮದೇವರಪಾಳ್ಯ, ಕಿತ್ತನಮಂಗಲ, ಕಾಡುಮತ್ತಿಕೆರೆ, ಗವಿಮಠ, ಅರಕೆರೆ, ತೆಪ್ಪಸಂದ್ರ, ಹುರಳಿಬೋರಸಂದ್ರ, ಮೊದೂರು, ಹೊಸಳ್ಳಿ, ಹುಲಿಯೂರುದುರ್ಗದ 600 ರೈತರಿಂದ 100 ಎಕರೆಯಷ್ಟು ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಇವರಿಗೆ ಅಂದಾಜು ₹ 50 ಕೋಟಿಯಷ್ಟು ಪರಿಹಾರ ಮೊತ್ತ ಬಿಡುಗಡೆ ಆಗಬೇಕು ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್‌ ಪಟೇಲ್‌ ಹುಲಿಕಟ್ಟೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*

ಕಾವೇರಿ ನೀರಾವರಿ ನಿಗಮದಿಂದ ಪರಿಹಾರದ ಮೊತ್ತ ಬಿಡುಗಡೆ ಆಗಿಲ್ಲ. ಹಾಗಾಗಿ ವಿಳಂಬ ಆಗುತ್ತಿದೆ. ರೈತರ ಸಮಸ್ಯೆಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ತಂದಿದ್ದೇನೆ.
-ಶೇಖರ್‌, ವಿಶೇಷ ಭೂಸ್ವಾಧೀನ ಅಧಿಕಾರಿ(ಹೆಚ್ಚುವರಿ), ಹೇಮಾವತಿ ನಾಲಾ ಯೋಜನೆ

*
‘ಕಮಿಷನ್‌’ ನೀಡಿ ನಾಲೆಯ ಕಾಮಗಾರಿ ನಡೆಸುವ ಗುತ್ತಿಗೆದಾರರ ಬಿಲ್‌ ಪಾಸ್‌ ಮಾಡಲು ನಿಗಮದಲ್ಲಿ ದುಡ್ಡಿದೆ. ‘ಕಮಿಷನ್‌’ ನೀಡದ ರೈತರಿಗೆ ಪರಿಹಾರ ನೀಡಲು ಅನುದಾನ ಇಲ್ಲವೇ?
-ಆನಂದ್‌ ಪಟೇಲ್‌, ತುಮಕೂರು ಜಿಲ್ಲಾ ಘಟಕ ಅಧ್ಯಕ್ಷ, ರೈತಸಂಘ

*
ಭೂಸ್ವಾಧೀನದ ಪರಿಹಾರವೂ ಬಂದಿಲ್ಲ. ನಾಲೆಗಳ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಇವೆರಡರಿಂದಲೂ ರೈತರು ಬಾಧಿತರಾಗಿದ್ದಾರೆ.
-ಕೆಂಕೆರೆ ಸತೀಶ್‌, ಉಪಾಧ್ಯಕ್ಷ, ರೈತಸಂಘ ಮತ್ತು ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.