ADVERTISEMENT

ಚಿಕ್ಕನಾಯಕನಹಳ್ಳಿಗೆ ಹೇಮೆ ಹರಿಸಿದ ಕೀರ್ತಿ ಯಾರಿಗೆ? ತೀವ್ರ ಚರ್ಚೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹರಿಯುತ್ತಿರುವ ಹೇಮಾವತಿ ನೀರು

ಆರ್.ಸಿ.ಮಹೇಶ್
Published 11 ಜನವರಿ 2021, 1:52 IST
Last Updated 11 ಜನವರಿ 2021, 1:52 IST
   

ಹುಳಿಯಾರು: ದಶಕಗಳ ಹೋರಾಟದ ಫಲವಾಗಿ ಹೇಮಾವತಿ ನೀರುಮೂರು ತಿಂಗಳಿನಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ಹರಿಯುತ್ತಿದೆ. ಈ ಹಿಂದೆ ರಾಜಕೀಯ ದಾಳವಾಗಿ ಬಳಕೆಯಾಗಿದ್ದ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನದ ನಂತರ ನೀರು ಹರಿಸಿದ ಶ್ರಮದ ಫಲ ಯಾರಿಗೆ? ಎನ್ನುವುದು ಚರ್ಚೆಗೆ ಕಾರಣವಾಗಿದೆ.

ಬೋರನಕಣಿವೆ ಜಲಾಶಯದ ಬಳಿ ಸ್ವಾಮೀಜಿ ಹಾಗೂ ಕೆಲವೇ ಕೆಲವು ಹೋರಾಟಗಾರರ ಸಭೆಯಲ್ಲಿ ಚರ್ಚಿಸಿದ ನೀರಾವರಿ ಹೋರಾಟ ಪ್ರಸ್ತಾಪವಾಯಿತು. ಕೆಲವೇ ದಿನಗಳಲ್ಲಿ ಹೋರಾಟ ಹುಳಿಯಾರು ಪಟ್ಟಣಕ್ಕೆ ಸ್ಥಳಾಂತರಗೊಂಡು 2009ರ ಜುಲೈ 13ರಂದು ನಾಡಕಚೇರಿ ಮುಂದೆ ಬರಪೀಡಿತ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ನೀರು ಹರಿಸಿ ಎಂಬ ಘೋಷಣೆಯೊಂದಿಗೆ ರೈತಸಂಘ ಘಟಕ 48ಕ್ಕೂ ಹೆಚ್ಚು ಸಂಘಸಂಸ್ಥೆಗಳ ಆಶ್ರಯದಲ್ಲಿ ಹೋರಾಟ ಆರಂಭಿವಾಯಿತು.

ಹೋರಾಟ ಸುಮಾರು 64 ದಿನಗಳ ಕಾಲ ನಿರಂತರವಾಗಿ ನಡೆದಿತ್ತು. ರೈತಸಂಘ ಹಾಗೂ ಸಂಘಸಂಸ್ಥೆಗಳ ಜತೆ ವಿವಿಧ ಮಠಾಧೀಶರು ಕೈ ಜೋಡಿಸಿ ಹೋರಾಟಕ್ಕೆ ಬಲ ತುಂಬಿದ್ದರು. ಆಗ ಶಾಸಕರಾಗಿದ್ದ ಸಿ.ಬಿ.ಸುರೇಶ್‌ಬಾಬು ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್‌ ಹೋರಾಟದ ಭಾಗವಾದರು. ಅಂದು ಬಿ.ಎಸ್.ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ತೀರಾ ಆಪ್ತರಾಗಿದ್ದ ಕಿರಣ್‌ಕುಮಾರ್‌ ನೀರಾವರಿ ಯೋಜನೆ ಸಕಾರಗೊಳಿಸುವಂತೆ ಒತ್ತಡ ಹೇರಿದ್ದರು. ಶಾಸಕರಾಗಿದ್ದ ಸುರೇಶ್‌ಬಾಬು ಸಹ ಸ್ವಾಮೀಜಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದೊಯ್ದು ಮುಖ್ಯಮಂತ್ರಿಗಳಲ್ಲಿ ಒತ್ತಡ ಹೇರಿದ್ದರು.

ADVERTISEMENT

ನಿರಂತರ ಹೋರಾಟದ ಫಲವಾಗಿ ₹120 ಕೋಟಿಯ ನೀರಾವರಿ ಯೋಜನೆಗೆ ಸರ್ಕಾರ ಅಸ್ತು ಎಂದಿತ್ತು. ಅದರ ಬೆನ್ನಲ್ಲೆ ಶೆಟ್ಟಿಕೆರೆ ಹೋಬಳಿಯಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿತ್ತು. ಆದರೆ ಯೋಜನೆ ಮಂಜೂರಾತಿ ಪಡೆದು ದಶಕಗಳೇ ಕಳೆದರೂ ಕಾರ್ಯರೂಪಕ್ಕೆ ಬಾರದೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಆಯ್ಕೆಯಾದ ಜೆ.ಸಿ.ಮಾಧುಸ್ವಾಮಿ ರಾಜ್ಯದ ಮಂತ್ರಿಯಾದರು. ಮಂತ್ರಿಯಾದ ದಿನದಿಂದಲೇ ನೀರಾವರಿ ಯೋಜನೆ ಬಗ್ಗೆ ಗಮನ ಹರಿಸಿದ ಸಚಿವರು ಕಾಮಗಾರಿಗೆ ಮತ್ತೆ ಜೀವ ತುಂಬಿದರು.

ಹೇಮಾವತಿ ನೀರು ಹರಿಸಿದ ಫಲ ಯಾರಿಗೆ ಸಲ್ಲಬೇಕು ಎಂಬುದೇ ತಾಲ್ಲೂಕಿನಲ್ಲಿ ಚರ್ಚೆಯ ವಿಷಯವಾಗಿದೆ. ಸ್ವಾಮೀಜಿಗಳು, ಮುಖಂಡರು ಯೋಜನೆಯಡಿ ನೀರು ಹರಿದ ಸಾಸಲು ಕೆರೆಗೆ ಬಾಗಿನವನ್ನು ಅರ್ಪಿಸಿದ್ದಾರೆ. ಇನ್ನೂ ಜೆ.ಸಿ.ಮಾಧುಸ್ವಾಮಿ ಅಭಿಮಾನಿಗಳು ಶೆಟ್ಟಿಕೆರೆಯಲ್ಲಿ ಮಂತ್ರಿಗಳಿಗೆ ಅಭಿನಂದನಾ ಕಾರ್ಯಕ್ರಮನು ಏರ್ಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರವರ ನಾಯಕರ ಹಿಂಬಾಲಕರು ಶ್ರಮದ ಫಲ ನಮ್ಮ ನಾಯಕರಿಗೆ ಸೇರಬೇಕು ಎಂಬ ಪೋಸ್ಟರ್‌ಗಳನ್ನು ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.