ADVERTISEMENT

ಕೆರೆಯಾಗಿ ಮಾರ್ಪಟ್ಟ ಹೆದ್ದಾರಿ: ವಾಹನ ಸವಾರರ ಪರದಾಟ

ಗುತ್ತಿಗೆದಾರರ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 1:52 IST
Last Updated 27 ಆಗಸ್ಟ್ 2021, 1:52 IST
ಹುಳಿಯಾರು ಪಟ್ಟಣದ ರಾಮಗೋಪಾಲ್‌ ವೃತ್ತದ ಬಳಿ ರಸ್ತೆ ಗುರುವಾರ ಬಿದ್ದ ಮಳೆಗೆ ಕೆರೆಯಾಗಿ ಮಾರ್ಪಟ್ಟಿತ್ತು
ಹುಳಿಯಾರು ಪಟ್ಟಣದ ರಾಮಗೋಪಾಲ್‌ ವೃತ್ತದ ಬಳಿ ರಸ್ತೆ ಗುರುವಾರ ಬಿದ್ದ ಮಳೆಗೆ ಕೆರೆಯಾಗಿ ಮಾರ್ಪಟ್ಟಿತ್ತು   

ಹುಳಿಯಾರು: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಎರಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಯದ ಕಾರಣ ರಾಮಗೋಪಾಲ್‌ ವೃತ್ತದ ಬಳಿ ಸಂಚಾರ ಅಸ್ತವ್ಯಸ್ತವಾಗಿದೆ. ಗುರುವಾರ ಬಿದ್ದ ಮಳೆಗೆ ಕೆರೆಯಾಗಿ ಮಾರ್ಪಟ್ಟು ವಾಹನಗಳ ಸವಾರರು ಸಂಚಾರಕ್ಕೆಪರದಾಡಿದರು.

ರಾಮಗೋಪಲ್ ವೃತ್ತದ ಬಳಿ ಕಾಮಗಾರಿ ಅವಧಿ ಮುಗಿದರೂ ಹೆದ್ದಾರಿ ಗುತ್ತಿಗೆದಾರರು ಕಾಮಗಾರಿ ಮುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ನಿತ್ಯವೂ ದೂಳಿನ ಸ್ನಾನ ಮಾಡುತ್ತಿದ್ದ ಜನ ಹಾಗೂ ವಾಹನಗಳ ಸವಾರರು ಗುರುವಾರ ನೀರಿನಲ್ಲಿ ತೇಲಾಡಿಕೊಂಡು ಓಡಾಡಿದರು.

ಅಪೂರ್ಣವಾದ ರಸ್ತೆ ಕಾಮಗಾರಿಯ ಸಮಸ್ಯೆ ಒಂದೆಡೆಯಾದರೆ, ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ಕಾಮಗಾರಿಯಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ಅಲ್ಪಸ್ವಲ್ಪ ಮಳೆಯಾದರೂ ಮೊಳಕಾಲುದ್ದ ನಿಲ್ಲುವ ನೀರು ಎಲ್ಲೂ ಹರಿಯದೆ ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಗುರುವಾರ ಸಂತೆಯ ದಿನವಾದ್ದರಿಂದ ಜನರ ಓಡಾಡ ತುಸು ಹೆಚ್ಚಾಗಿತ್ತು. ಮಧ್ಯಾಹ್ನದ ವೇಳೆಗೆ ರಭಸವಾಗಿ ಸುರಿದ ಮಳೆಗೆ ರಾಮಗೋಪಾಲ್‌ ವೃತ್ತದಲ್ಲಿ ದೊಡ್ಡ ಕೆರೆಯೇ ನಿರ್ಮಾಣವಾಗಿತ್ತು. ವಾಹನಗಳು ಅರ್ಧ ಮುಳುಗುವ ನೀರಿನಲ್ಲಿ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಿದರು. ನೀರಿನಲ್ಲಿ ಗುಂಡಿಗಳು ಕಾಣದೆ ಕೆಲವರುರಸ್ತೆಯಲ್ಲಿ ಬಿದ್ದು, ಎದ್ದು ಇಡೀ ವ್ಯವಸ್ಥೆಯ ಮೇಲೆ ಹಿಡಿಶಾಪಹಾಕುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.