ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೆದ್ದಾರಿ ಸಂತ್ರಸ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 11:01 IST
Last Updated 29 ಸೆಪ್ಟೆಂಬರ್ 2019, 11:01 IST
   

ತಿಪಟೂರು: ರಾಷ್ಟ್ರೀಯ ಹೆದ್ದಾರಿ–206( ತುಮಕೂರು–ಹೊನ್ನಾವರ ವಿಭಾಗ) ಚತುಷ್ಪಥ ರಸ್ತೆ ಮತ್ತು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಂಡಿದ್ದು, ನ್ಯಾಯಯುತ ಪರಿಹಾರಕ್ಕೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸದೇ ತೆರಳಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಹೆದ್ದಾರಿ–206 ಸಂತ್ರಸ್ತರ ಹೋರಾಟ ಸಮಿತಿ, ರೈತ ಕೃಷಿ ಕಾರ್ಮಿಕರ ಸಂಘಟನೆ, ರೈತ ಸಂಘಟನೆ ಮುಖಂಡರು, ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಲ್ಲೂಕಿನ ಹೊನ್ನವಳ್ಳಿಯ ಹೊನ್ನಾಂಬಿಕಾ ದೇವಿ ದರ್ಶನ ಪಡೆದ ಬಳಿಕ ಮನವಿಯನ್ನು ರೈತರು ಸಲ್ಲಿಸಿದರು. ಎಡೆಯೂರಿಗೆ ಹೊರಡುವ ಅವಸರದಲ್ಲಿ ಮುಖ್ಯಮಂತ್ರಿ ಮನವಿ ಸ್ವೀಕರಿಸಿ ತೆರಳಿದರು.

ಇದಕ್ಕೆ ಆಕ್ರೋಶಗೊಂಡ ಸಂತ್ರಸ್ತರು, ರೈತ ಸಂಘಟನೆ ಮುಖಂಡರು ಹೊನ್ನಾಂಬಿಕಾ ದೇವಸ್ಥಾನದ ಮುಂದೆಯೇ ಮುಖ್ಯಮಂತ್ರಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರೈತರು ಭೂಮಿ ಕಳೆದುಕೊಂಡಿದ್ದಾರೆ. ಪರಿಹಾರ ಪುಡಿಗಾಸು ನೀಡಲಾಗುತ್ತಿದೆ. ಎರಡುವರೆ ವರ್ಷಗಳಿಂದ ತಿಪಟೂರು, ಗುಬ್ಬಿ, ಕಡೂರು, ಬೀರೂರು, ತರೀಕೆರೆ ಭಾಗದ ರೈತರು ನ್ಯಾಯಬದ್ಧವಾಗಿ ಹೋರಾಟ ಮಾಡಿದರೂ ಸ್ಪಂದಿಸಿಲ್ಲ. ಈಗ ಮುಖ್ಯಮಂತ್ರಿಗಳಿಗೆ ಖುದ್ದಾಗಿಯೇ ಮನವಿ ಮಾಡಲು ಮುಂದಾದರೂ ಕಿವಿಗೊಡದೇ ತೆರಳಿದ್ದಾರೆ ಎಂದು ಸಂತ್ರಸ್ತರ ಹೋರಾಟ ಸಮಿತಿಯ ಎಸ್.ಎನ್.ಸ್ವಾಮಿ ದೂರಿದರು.

ಮುಖಂಡರಾದ ಆನಂದ.ಸಿ, ಬೈರನಾಯಕನಹಳ್ಳಿ ಮಾದೇಶ, ಮನೋಹರ್, ಬೆನ್ನಾಯಕನಹಳ್ಳಿ ದೇವರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.