ADVERTISEMENT

ತುಮಕೂರು| ವೈಭವ ಕಳೆದುಕೊಂಡ ಐತಿಹಾಸಿಕ ಕಲ್ಯಾಣಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 14:45 IST
Last Updated 26 ಮಾರ್ಚ್ 2023, 14:45 IST
ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಯಾಣಿಯ ಮೆಟ್ಟಿಲು ಕುಸಿದಿರುವುದು
ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಯಾಣಿಯ ಮೆಟ್ಟಿಲು ಕುಸಿದಿರುವುದು   

ತುಮಕೂರು: ಜಿಲ್ಲೆಯ ಪ್ರವಾಸಿ ಸ್ಥಳ, ನಿಸರ್ಗಧಾಮ ದೇವರಾಯನದುರ್ಗದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿಯೇ ಇರುವ ಐತಿಹಾಸಿಕ ಕಲ್ಯಾಣಿ ಕಾಯಕಲ್ಪಕ್ಕಾಗಿ ಎದುರು ನೋಡುತ್ತಿದೆ.

ಕಲ್ಯಾಣಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು, ಮೆಟ್ಟಿಲುಗಳು, ರಕ್ಷಣೆಗಾಗಿ ಇರಿಸಿದ್ದ ಕಲ್ಲುಗಳು ಕುಸಿದಿವೆ. ಗಿಡಗಳು ಬೆಳೆದು ನಿಂತಿವೆ. ಸ್ವಚ್ಛತೆಯೂ ಮರೀಚಿಕೆಯಾಗಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದ್ದ ದೇವಸ್ಥಾನದ ಸಿಬ್ಬಂದಿ ಮತ್ತು ಪಂಚಾಯಿತಿ ಆಡಳಿತ ವರ್ಗ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಿದಂತಿಲ್ಲ.

ಈ ಹಿಂದೆ ಅಡುಗೆ ಮಾಡಲು, ಕುಡಿಯಲು, ದೇವರ ಮೂರ್ತಿಯ ಪೂಜೆಗೆ ಬಳಕೆಯಾಗುತ್ತಿದ್ದ ನೀರು ಇಂದು ಕಲುಷಿತಗೊಂಡಿವೆ. ಮನೆಯ ತ್ಯಾಜ್ಯ, ಮನೆಯಲ್ಲಿ ಬಳಸಿದ ತೆಂಗಿನಕಾಯಿಯ ಚಿಪ್ಪು, ನಿಂಬೆ ಹಣ್ಣು, ಬಟ್ಟೆಗಳನ್ನು ಕಲ್ಯಾಣಿಗೆ ಎಸೆಯುತ್ತಿರುವುದರಿಂದ ಕಲ್ಯಾಣಿ ತನ್ನ ವೈಭವವನ್ನೇ ಕಳೆದುಕೊಂಡಿದೆ.

ADVERTISEMENT

ಕಲ್ಯಾಣಿಯ ಸುತ್ತಮುತ್ತ ರಕ್ಷಣೆಗೆ ಯಾವುದೇ ವ್ಯವಸ್ಥೆ ಇಲ್ಲ. ಜಾತ್ರೆ, ತೆಪ್ಪೋತ್ಸವ ಸಮಯದಲ್ಲಿ ಜನರು ಭಯದ ವಾತಾವರಣದಲ್ಲಿಯೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕಾವಲುಗಾರರನ್ನು ನೇಮಕ ಮಾಡಿದ್ದರು. ಈಗ ಯಾರೂ ಈ ಕೆಲಸ ಮಾಡುತ್ತಿಲ್ಲ. ಹೀಗಾಗಿ ಕೆಲವರು ಎಗ್ಗಿಲ್ಲದಂತೆ ಎಲ್ಲ ತ್ಯಾಜ್ಯವನ್ನು ಕಲ್ಯಾಣಿಗೆ ಎಸೆಯುತ್ತಿದ್ದಾರೆ.

ಪ್ರವಾಸಿ ಸ್ಥಳದಲ್ಲಿರುವ ಐತಿಹಾಸಿಕ ಕುರುಹು ಕಲ್ಯಾಣಿಯ ಪುನಶ್ಚೇತನವನ್ನೇ ಮರೆತಿದ್ದಾರೆ. ಪ್ರತಿ ನಿತ್ಯ ನೂರಾರು ಜನ ಪ್ರವಾಸಿಗರು ದೇವರಾಯನ ದುರ್ಗಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತದೆ. ಕಲ್ಯಾಣಿ ಅಭಿವೃದ್ಧಿ ಪಡಿಸಿದರೆ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಐತಿಹಾಸಿಕ ಸ್ಥಳವನ್ನೂ ಉಳಿಸಿದಂತಾಗುತ್ತದೆ ಎಂಬುವುದು ಗ್ರಾಮಸ್ಥರ ಒತ್ತಾಯ.

ನರೇಗಾ ಮತ್ತು ಸರ್ಕಾರದ ಇತರೆ ಯೋಜನೆಗಳಲ್ಲಿ ಕಲ್ಯಾಣಿಯ ಪುನಶ್ಚೇತನ ಮಾಡಬಹುದಿತ್ತು. ಇಲ್ಲವೇ ಸರ್ಕಾರದಿಂದ ವಿಶೇಷ ಅನುದಾನ ತಂದು ಅಭಿವೃದ್ಧಿ ಪಡಿಸಬಹುದಿತ್ತು. ಈ ಕೆಲಸದ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಒಂದೆರಡು ಬಾರಿ ಕಲ್ಯಾಣಿಯ ಹೂಳು ತೆಗೆಸಲಾಗಿತ್ತು. ಅದು ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಪಂಚಾಯಿತಿ ಅಧಿಕಾರಿಗಳು ದೇವಸ್ಥಾನದವರ ಮೇಲೆ ಹೇಳುತ್ತಾರೆ. ದೇವಸ್ಥಾನದವರು ಪಂಚಾಯಿತಿಯಿಂದ ಅಭಿವೃದ್ಧಿ ಪಡಿಸಬೇಕು ಎನ್ನುತ್ತಾರೆ. ಇವರ ಗೊಂದಲದ ಮಧ್ಯೆ ಕಲ್ಯಾಣಿ ದಿನೇ ದಿನೇ ಹಾಳಾಗುತ್ತಿದೆ ಎಂದು ಊರಿನ ಜನರು ದೂರಿದರು.

**

ಸರ್ಕಾರಕ್ಕೆ ಪ್ರಸ್ತಾವನೆ

ಕಲ್ಯಾಣಿಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಗಾಗಿ 2021ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಹಣ ಬಂದಿಲ್ಲ. ಪ್ರಸ್ತಾವನೆ ಸಲ್ಲಿಕೆಯಾಗಿ ಎರಡು ವರ್ಷಗಳು ಕಳೆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಸ್ಪಂದಿಸಿಲ್ಲ.

ಅನವಶ್ಯಕ ಕೆಲಸಗಳಿಗೆ ಕೋಟ್ಯಂತರ ವ್ಯಯಿಸುವ ಸರ್ಕಾರ ಐತಿಹಾಸಿಕ ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಪ್ರವಾಸೋದ್ಯಮ ಇಲಾಖೆಯೂ ಇತ್ತ ಗಮನ ಹರಿಸಬೇಕು ಎಂಬುವುದು ಜಿಲ್ಲೆಯ ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

**

ಅಧಿಕಾರಿಗಳು ಕಚೇರಿ ಬಿಟ್ಟು ಬರಲಿ

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್‌ ತಮ್ಮ ಕಚೇರಿಗಳ ಮುಂಭಾಗದಲ್ಲಿ ಪೊರಕೆ ಹಿಡಿದು, ಫೋಟೊಗಳಿಗೆ ಫೋಸು ನೀಡುತ್ತಿದ್ದಾರೆ. ನಗರದಿಂದ ಹದಿನೈದು ಕಿ.ಮೀ ದೂರದಲ್ಲಿರುವ ಪ್ರವಾಸಿ ಸ್ಥಳ ಇವರ ಕಣ್ಣಿಗೆ ಕಂಡಂತಿಲ್ಲ.

ಪ್ರತಿ ತಿಂಗಳ ಮೊದಲನೇ ಶನಿವಾರ ಸ್ವಚ್ಛತೆಯ ದಿನ ಎಂದು ಆಚರಿಸಲಾಗುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ತಮ್ಮ ಕಚೇರಿಗಳ ಮುಂಭಾಗದಲ್ಲಿ ಸ್ವಚ್ಛತೆ ಮಾಡುವ ಬದಲಾಗಿ, ಇಂತಹ ಕ್ಷೇತ್ರಗಳತ್ತ ದೃಷ್ಟಿ ನೆಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

**

ನರಹರಿ ತೀರ್ಥ

ದೇವರಾಯನ ದುರ್ಗದಲ್ಲಿ ಒಂಬತ್ತು ತೀರ್ಥಗಳಿದ್ದು, ದೇವಸ್ಥಾನದ ಹಿಂಭಾಗದಲ್ಲಿರುವುದು ನರಹರಿ ತೀರ್ಥ. ಇದರ ಉಳಿವಿಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಆಗೊಮ್ಮೆ, ಈಗೊಮ್ಮೆ ಗಿಡ ಕಿತ್ತುವ ಕೆಲಸ ಮಾಡುತ್ತಾರೆ. ಕಲ್ಯಾಣಿಯ ವೀಕ್ಷಣೆಗೆ ತೆರಳುವವರಿಗೆ ಸೂಕ್ತ ರಕ್ಷಣೆ ಇಲ್ಲ. ಸ್ನಾನಕ್ಕೂ ಪ್ರತ್ಯೇಕವಾದ ವ್ಯವಸ್ಥೆ ಇಲ್ಲ. ಈ ಒಂದು ಕಲ್ಯಾಣಿ ಅಭಿವೃದ್ಧಿ ಪಡಿಸಿದರೆ, ಹಲವು ರೀತಿಯಲ್ಲಿ ಪ್ರಯೋಜನವಾಗಲಿದೆ.

ಯಲ್ಲಪ್ಪ, ಗ್ರಾಮಸ್ಥರು

**

ಕಾವಲುಗಾರರನ್ನು ನೇಮಿಸಿ

ಕಲ್ಯಾಣಿಗೆ ತ್ಯಾಜ್ಯ ಎಸೆಯದಂತೆ ಹಲವು ಬಾರಿ ಜಗಳ ಮಾಡಿದ್ದೇವೆ. ಜನರು ಕೇಳುವುದಿಲ್ಲ. ಇಲ್ಲಿಯೇ ಒಬ್ಬರು ಕಾವಲುಗಾರರನ್ನು ನೇಮಿಸಿದರೆ ಉತ್ತಮ. ಪ್ರಾರಂಭದಲ್ಲಿ ಇದೇ ನೀರಿನಿಂದ ಅಡುಗೆ ಮಾಡುತ್ತಿದ್ದೇವೆ. ಈಗ ಕನಿಷ್ಠ ಬಳಕೆಗೆ ಸಾಧ್ಯವಾಗುತ್ತಿಲ್ಲ.

ಅಂಬುಜಮ್ಮ, ಗ್ರಾಮಸ್ಥರು

**

ಪ್ರವಾಸಿ ಸ್ಥಳಕ್ಕೆ ಮೆರುಗು

ಕೋಡಿ ಹರಿದ ಪ್ರತಿ ಸಾರಿ ತೆಪ್ಪೋತ್ಸವ ಮಾಡಲಾಗುತ್ತದೆ. ಅಗತ್ಯ ಸೌಲಭ್ಯ ಕಲ್ಪಿಸಿ ಕಲ್ಯಾಣಿ ಅಭಿವೃದ್ಧಿ ಪಡಿಸಿದರೆ, ಪ್ರವಾಸಿ ಸ್ಥಳಕ್ಕೆ ಮತ್ತಷ್ಟು ಮೆರುಗು ಬರುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ.

ನಾರಾಯಣ, ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.