ADVERTISEMENT

ದೇಶದಲ್ಲಿ ಹಿಟ್ಲರ್ ಆಡಳಿತ: ಕಾಂಗ್ರೆಸ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 8:08 IST
Last Updated 7 ಅಕ್ಟೋಬರ್ 2021, 8:08 IST

ತುಮಕೂರು: ದೇಶದಲ್ಲಿ ಹಿಟ್ಲರ್ ಆಡಳಿತ ಮುಂದುವರಿದಿದ್ದು, ರೈತರ ಬಲಿ ತೆಗೆದುಕೊಳ್ಳಲಾಗುತ್ತಿದೆ. ನ್ಯಾಯ ಕೇಳಲು ಮುಂದಾದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಗೃಹಬಂಧನದಲ್ಲಿ ಇಟ್ಟು ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ವಾಹನ ಹರಿಸಿ ರೈತರನ್ನು ಹತ್ಯೆ ಮಾಡಿದ್ದಾರೆ.ಸಾಂತ್ವನ ಹೇಳಲು ಘಟನೆ ನಡೆದ ಸ್ಥಳಕ್ಕೆ ತೆರಳುತ್ತಿದ್ದ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿ ಗೃಹ ಬಂಧನದಲ್ಲಿ ಇಡಲಾಗಿದೆ. ಈವರೆಗೂ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ನ್ಯಾಯ ಕೇಳಿದರೆ ಬಂಧಿಸುತ್ತಾರೆ ಎಂದು ಶಾಸಕ ಡಾ.ಜಿ.ಪರಮೇಶ್ವರ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಆರೋಪಿಸಿದರು.

ರೈತರನ್ನು ಸಾಯಿಸಿದ ಸಚಿವರ ಪುತ್ರನನ್ನು ತಕ್ಷಣ ಬಂಧಿಸಬೇಕು, ಸಚಿವ ಸ್ಥಾನದಿಂದ ಮಿಶ್ರ ಅವರನ್ನು ವಜಾ ಮಾಡಬೇಕು. ತಪ್ಪಿತಸ್ಥರ ಮೇಲೆಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಈ ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶಕ್ಕೆ ಹೋಗಿದ್ದರೂ ರೈತರನ್ನು ಹತ್ಯೆ ಮಾಡಿದ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಮೃತರ ಕುಟುಂಬಗಳಿಗೆಸಾಂತ್ವನ ಹೇಳುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. ಹಿಟ್ಲರ್ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಇದೆಂತಹ ಪ್ರಜಾಪ್ರಭುತ್ವ ವ್ಯವಸ್ಥೆ. ಪಂಜಾಬ್‌ನ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೆನಪಿಗೆ ಬರುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ನಾವು ಯಾವ ಹಂತಕ್ಕೆ ಬೇಕಾದರೂ ಹೋಗಿ ಹೋರಾಟಕ್ಕೆ ಇಳಿಯುತ್ತೇವೆ’ ಎಂದು ಎಚ್ಚರಿಸಿದರು.

ಮೋದಿ ಅವರಿಗೆ ಪ್ರಿಯಾಂಕ ಗಾಂಧಿ ಕಂಡರೆ ಭಯವಾಗುತ್ತಿದೆ. ಅದಕ್ಕಾಗಿ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಈಗಿನಿಂದಲೇ ಬಿಜೆಪಿಯವರು ಹೊಸ ವರಸೆ ಆರಂಭಿಸಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ಮತ್ತೊಬ್ಬ ಮುಖಂಡ ಟಿ.ಬಿ.ಜಯಚಂದ್ರ, ‘ಮೋದಿ ಅವರು ಅಮೆರಿಕಾಗೆ ಹೋಗಿ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡಿದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಅಲ್ಲೂ ಸಹ ಇವರ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ರೈತರನ್ನು ಹತ್ಯೆ ಮಾಡಿಸಿರುವುದನ್ನು ಗಮನಿಸಿದರೆ ಅಧಿಕಾರದಲ್ಲಿ ಉಳಿಯುವ ಯಾವ ನೈತಿಕತೆಯೂ ಕಾಣುತ್ತಿಲ್ಲ. ಬಿಜೆಪಿ ಹಾಗೂ ಮೋದಿ ಅವರಿಗೆ ಅಂತಿಮ ದಿನಗಳು ಎದುರಾಗಿವೆ. ಸೋಲಿನ ಭಯ ಕಾಡಲಾರಂಭಿಸಿದೆ’ ಎಂದು ವಾಗ್ದಾಳಿ ನಡೆಸಿದರು.

ರೈತ ವಿರೋಧಿಯಾಗಿರುವ ಕೃಷಿ ಕಾಯ್ದೆಗಳ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಲು ಅವಕಾಶ ನೀಡುತ್ತಿಲ್ಲ. ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಅದನ್ನು ಪರಿಗಣಿಸದೆ ಜಾರಿ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಜಾರಿ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಕಾನೂನು, ಸಂವಿಧಾನಕ್ಕೆ ಗೌರವ ನೀಡುತ್ತಿಲ್ಲ. ಬಿಜೆಪಿ ಸರ್ಕಾರಕ್ಕೆ ಅಂತಿಮ ಕ್ಷಣಗಳು ಆರಂಭವಾಗಿವೆ ಎಂದು ದೂರಿದರು.

ಪಕ್ಷದ ಮುಖಂಡರಾದ ಆರ್.ನಾರಾಯಣ, ಷಫಿ ಅಹ್ಮದ್, ಆರ್.ರಾಮಕೃಷ್ಣ, ನಿಖಿಲ್ ರಾಜ್, ಹೊನ್ನಗಿರಿಗೌಡ, ಮರಿಚನ್ನಮ್ಮ, ಮುರಳೀಧರ ಹಾಲಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.