ADVERTISEMENT

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗೆ ನಮನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 5:22 IST
Last Updated 22 ಜನವರಿ 2023, 5:22 IST
ಸಿದ್ಧಗಂಗಾ ಮಠದಲ್ಲಿ ಶನಿವಾರ ಶಿವಕುಮಾರ ಸ್ವಾಮೀಜಿ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸಿದ್ಧಲಿಂಗ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಭಗವಂತ ಖೂಬ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಚಿವರಾದ ವಿ. ಸೋಮಣ್ಣ, ಎಸ್.ಟಿ. ಸೋಮಶೇಖರ್, ಆರಗ ಜ್ಞಾನೇಂದ್ರ ಇತರರು ಇದ್ದಾರೆ
ಸಿದ್ಧಗಂಗಾ ಮಠದಲ್ಲಿ ಶನಿವಾರ ಶಿವಕುಮಾರ ಸ್ವಾಮೀಜಿ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸಿದ್ಧಲಿಂಗ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಭಗವಂತ ಖೂಬ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಚಿವರಾದ ವಿ. ಸೋಮಣ್ಣ, ಎಸ್.ಟಿ. ಸೋಮಶೇಖರ್, ಆರಗ ಜ್ಞಾನೇಂದ್ರ ಇತರರು ಇದ್ದಾರೆ   

ತುಮಕೂರು: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ತಮ್ಮ ಜ್ಞಾನವನ್ನು ಲೋಕ ಕಲ್ಯಾಣಕ್ಕೆ ಅರ್ಪಣೆ ಮಾಡಿಕೊಂಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದರು.

ಸಿದ್ಧಗಂಗಾ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಯ ನಾಲ್ಕನೇ ಪುಣ್ಯ ಸ್ಮರಣೋ ತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದು ಕಷ್ಟಕರ. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತೇವೆ. ಸಮಯಕ್ಕೊಂದು ಸುಳ್ಳು ಹೇಳುತ್ತಿರುತ್ತೇವೆ. ಲೌಕಿಕ ಲಾಭ– ನಷ್ಟಗಳಿಂದ ದೂರವಿದ್ದರೆ ಮಾತ್ರ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲು ಸಾಧ್ಯ. ಅಂತಹ ‘ಆತ್ಮಸಾಕ್ಷಿ’ಯಂತೆ ಬದುಕಿದವರು ಶಿವಕುಮಾರ ಸ್ವಾಮೀಜಿ. ಸಮಾಜಕ್ಕೆ ಅನ್ನ, ಜ್ಞಾನ, ಆಶ್ರಯ ಕೊಟ್ಟು, ಜನರಿಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ADVERTISEMENT

ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅವರ ವಿಚಾರಗಳು ಬದುಕಿರುವುದು ಮುಖ್ಯ. ಹುಟ್ಟಿದಾಗ ಇದ್ದ ಮುಗ್ಧತೆಯನ್ನು ಜೀವಿತದ ಕೊನೆಯವರೆಗೂ ಮುಂದುವರಿಸಿ ಕೊಂಡು ಹೋಗುವುದು ಕಷ್ಟಕರ. ಅಂತರಂಗದಲ್ಲಿ ಶುದ್ಧಿ ಇದ್ದರೆ ಬಹಿರಂಗ ಶುದ್ಧಿ ಕಾಣಬಹುದು. ಅಂತಹವರ ಸಾಲಿಗೆ ಸ್ವಾಮೀಜಿ ಸೇರಿದವರು ಎಂದು ನೆನಪಿಸಿಕೊಂಡರು.

‘ಬಸವಣ್ಣನವರು ಇಂದಿಗೂ ಪ್ರಸ್ತುತ’ ಎಂದು ಹೇಳುತ್ತೇವೆ. ಆ ಬಗ್ಗೆ ಚಿಂತಿಸಬೇಕಿದೆ. ಅನಿಷ್ಟ ಪದ್ಧತಿಗಳು, ಆಚರಣೆ, ಅಸ್ಪೃಶ್ಯತೆ ವಿರುದ್ಧ ಬಸವಣ್ಣ ಹೋರಾಟ ಮಾಡಿದ್ದರು. ಈಗಲೂ ಪ್ರಸ್ತುತ ಎಂದು ಹೇಳಿದರೆ ಸಮಾಜದಲ್ಲಿ ಅಸಮಾನತೆ, ಜಾತಿ ಭೇದ ಇದೆ ಎಂದರ್ಥ. ಇಂತಹ ಆಚರಣೆಗಳು ಇದ್ದರೆ ಬಸವಣ್ಣ ನಡೆಸಿದ ಕ್ರಾಂತಿ ಮತ್ತೊಮ್ಮೆ ನಡೆಯಬೇಕಾಗುತ್ತದೆ. ಇಂತಹ ಕ್ರಾಂತಿಗೆ ಮಠಗಳು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ‘ಸಂವಿಧಾನ ಸಮಾಜವನ್ನು ಮುಂದೆ ತೆಗೆದುಕೊಂಡು ಹೋಗುವುದಿಲ್ಲ. ಆದರೆ, ಅದರ ಹಿಂದೆ ಇರುವ ಅಂಬೇಡ್ಕರ್ ಎಂಬ ಚೇತನ ಶಕ್ತಿ ನಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತದೆ. ಗ್ರಾಮಕ್ಕೆ ಒಳ್ಳೆಯದಾಗಲಿ, ಕೆರೆಗೆ ನೀರು ತುಂಬಲಿ ಎಂದು ಕುಟುಂಬದ ಸೊಸೆಯೊಬ್ಬರು ಸಮರ್ಪಣೆ ಮಾಡಿಕೊಂಡರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಲಾಗುತ್ತದೆ. ಈ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ, ತರಗತಿಗಳ ಕೊಠಡಿಗಳಲ್ಲಿ ಬೇರೆ ರೀತಿ ಯೋಚಿಸುತ್ತಾರೆ’ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧ್ಯಾತ್ಮದ ಕಡೆಗೆ ಹೊರಟಿದ್ದರು. ರಾಮಕೃಷ್ಣ ಆಶ್ರಮದಲ್ಲಿ ಸನ್ಯಾಸಿಗಳು ಮಾರ್ಗದರ್ಶನ ಮಾಡಿದ್ದರಿಂದ ದೇಶಕ್ಕೆ ಒಬ್ಬ ಪ್ರಧಾನಿ ಸಿಗುವಂತಾಯಿತು. ಮಠಗಳು, ದೇಗುಲಗಳು ದಿನದ 24 ಗಂಟೆಗಳ ಕಾಲವೂ ಜನರಿಗೆ ಮುಕ್ತವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಭಕ್ತಿ ಸಮರ್ಪಣೆ ಮಾಡಿದ ವಸತಿ ಸಚಿವ ವಿ. ಸೋಮಣ್ಣ, ‘ಶಿವಕುಮಾರ ಸ್ವಾಮೀಜಿ ಕುರಿತ ಪುಸ್ತಕಗಳು ಎಲ್ಲಾ ಶಾಲೆಗಳು, ಗ್ರಂಥಾಲಯಗಳಲ್ಲಿ ಸಿಗುವಂತಾಗಬೇಕು’ ಎಂದು ತಿಳಿಸಿದರು.

ಕಾನೂನು, ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ‘ಶಿವಕುಮಾರ ಸ್ವಾಮೀಜಿ ದೊಡ್ಡ ಆಲದ ಮರವಿದ್ದಂತೆ. ಮನಸ್ಸಿನಲ್ಲಿ ತುಮುಲ, ಸಂಕಟ, ನೋವುಗಳು ಇದ್ದಾಗ ಸ್ವಾಮೀಜಿ ಮುಂದೆ ಕುಳಿತು, ಚರ್ಚಿಸಿದರೆ ಮನಸ್ಸು ನಿರಾಳವಾಗುತ್ತಿತ್ತು. ತುಮುಲಗಳು ಸಂಕಟಗಳಾದರೆ ಸಂತೈಸುವವರು ಇರುವುದಿಲ್ಲ. ಈಗ ಸ್ವಾಮೀಜಿಯನ್ನು ಕಳೆದುಕೊಂಡಿದ್ದು, ಸ್ಮರಿಸುವುದಷ್ಟೇ ಉಳಿದಿದೆ’ ಎಂದು ಹೇಳಿದರು.

ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಭಗವಂತ ಖೂಬ, ‘ಬಸವರಾಜ ಬೊಮ್ಮಾಯಿ, ಮೋದಿ ನೇತೃತ್ವದ ಸರ್ಕಾರಗಳು ಒಟ್ಟಾಗಿ ಸಿದ್ಧ ಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಕೊಟ್ಟಿವೆ’ ಎಂದರು.

ಸಾನ್ನಿಧ್ಯವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ, ‘ಶಿವಕುಮಾರ ಸ್ವಾಮೀಜಿ ಸಾಗಿದ ದಾರಿಯಲ್ಲಿ ಸಾಗುತ್ತಿದ್ದೇನೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳ ಬೇಕಿದೆ’ ಎಂದು ಪ್ರಶ್ನಿಸಿಕೊಂಡರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ಸಚಿವರಾದ ಆರಗ ಜ್ಞಾನೇಂದ್ರ, ಎಸ್.ಟಿ. ಸೋಮಶೇಖರ್, ಬಿ.ಸಿ. ನಾಗೇಶ್, ಸಂಸದ ಜಿ.ಎಸ್. ಬಸವರಾಜು, ಮೇಯರ್ ಎಂ. ಪ್ರಭಾವತಿ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ನಾರಾಯಣಸ್ವಾಮಿ, ಮಸಾಲೆ ಜಯರಾಂ, ಬಿಜೆಪಿ ಮುಖಂಡರಾದ ಬಿ.ವೈ. ವಿಜಯೇಂದ್ರ, ಬಿ. ಸುರೇಶ್‌ಗೌಡ, ಸೊಗಡು ಶಿವಣ್ಣ ಉಪಸ್ಥಿತರಿದ್ದರು. ಸಿ. ಸೋಮಶೇಖರ್ ನಿರೂಪಿಸಿದರು.

ಗದ್ದುಗೆ ಪೂಜೆ

ಮುಂಜಾನೆಯೇ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಪೂಜೆ ನೆರವೇರಿಸುವ ಮೂಲಕ ಸಂಸ್ಮರಣೋತ್ಸವ ಚಾಲನೆ ಪಡೆದುಕೊಂಡಿತು.

ಸ್ವಾಮೀಜಿ ತಮ್ಮ ಗುರುವಿಗೆ ಪೂಜೆ ಸಲ್ಲಿಸಿ ನಮಿಸಿದರು. ನಂತರ ಧಾರ್ಮಿಕ ವಿಧಿವಿಧಾನಗಳು ಆರಂಭವಾದವು. ಇತರೆ ಸ್ವಾಮೀಜಿಗಳು ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. ಸರದಿಯಲ್ಲಿ ಬಂದ ಭಕ್ತರು ತಮ್ಮ ಗುರುವಿಗೆ ನಮಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಸ್ವಾಮೀಜಿ ಕಂಚಿನ ಪುತ್ಥಳಿಯನ್ನು ಮೆರವಣಿಗೆ ಮಾಡಲಾಯಿತು.

ನಿರಂತರ ದಾಸೋಹ; ಭಕ್ತ ಸಾಗರ

ಶನಿವಾರ ಬೆಳಿಗ್ಗೆ ಆರಂಭವಾದ ದಾಸೋಹ ಇಡೀ ದಿನ ಮುಂದುವರಿಯಿತು. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ದಾಸೋಹ ಭವನ ಸೇರಿದಂತೆ ವಿವಿಧೆಡೆ ಊಟ ಬಡಿಸಲಾಯಿತು.

ಶುಕ್ರವಾರದಿಂದಲೇ ಮಠದತ್ತ ಹೆಜ್ಜೆ ಹಾಕಿದ ಭಕ್ತರು ಶನಿವಾರವೂ ಬರುತ್ತಲೇ ಇದ್ದರು. ತಮ್ಮ ಗುರುವನ್ನು ಕಂಡು ನಮಿಸಿದರು. ಹಳೆಯದನ್ನು ನೆನಪಿಸಿಕೊಂಡು ಮರುಗಿದರು. ನೋವಿನಿಂದಲೇ ಸ್ವಾಮೀಜಿ ಗದ್ದುಗೆಗೆ ನಮಿಸಿ ದಾಸೋಹ ಭವನದತ್ತ ನಡೆದರು. ಪ್ರಸಾದ ಸ್ವೀಕರಿಸಿ ತಮ್ಮ ಊರಿನತ್ತ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.